ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ತಮ್ಮ ರಾಜಕೀಯ ಬದುಕಿನ ಮುಖ್ಯ ಉದ್ದೇಶವಾಗಿದ್ದು, ಅರಸೀಕೆರೆ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ದಿಸೆಯಲ್ಲಿ ನಿರಂತರ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸದನದ ಒಳಗೂ ಹೊರಗೂ ಹೋರಾಟ ನಡೆಸಿ ಅನುದಾನ ತರಲಾಗಿದ್ದು, ಅದರ ಫಲವಾಗಿ ವಿವಿಧ ಮೂಲಸೌಕರ್ಯ ಕಾಮಗಾರಿಗಳು ವೇಗವಾಗಿ ಜಾರಿಗೊಂಡಿವೆ ಎಂದರು. ನದಿ ಮೂಲದಿಂದ ಶುದ್ಧ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ವಿದ್ಯುತ್ ವಿಸ್ತರಣೆ, ಶಿಕ್ಷಣ ಕ್ಷೇತ್ರದ ಬಲವರ್ಧನೆ ಸೇರಿದಂತೆ ಹಲವು ಯೋಜನೆಗಳು ಕ್ಷೇತ್ರದ ರೂಪುರೇಷೆ ಬದಲಿಸುವಲ್ಲಿ ಸಹಕಾರಿಯಾಗಿವೆ. ಅಭಿವೃದ್ಧಿಯ ಫಲಿತಾಂಶ ಇಂದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಜನರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿ, ಕ್ರೀಡಾಪಟುಗಳ ಬಹುಕಾಲದ ಬೇಡಿಕೆಯಾಗಿದ್ದ ಒಳಾಂಗಣ ಕ್ರೀಡಾಂಗಣಕ್ಕೆ ಸರ್ಕಾರ ಮಂಜೂರು ನೀಡಿರುವುದು ಸಂತಸದ ವಿಷಯವಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಸೌಲಭ್ಯ ಒದಗಿಸಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಕೆಪಿಸಿಸಿ ಕಾರ್ಯದರ್ಶಿ ಶಶಿಧರ್, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಧರ್ಮಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯಕ್, ಪುರಸಭೆ ಮಾಜಿ ಅಧ್ಯಕ್ಷೆ ರುಕ್ಮಿಣಿ ಜೈಕುಮಾರ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ರೇಖಾ ಜಯಣ್ಣ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ವೈ.ಕೆ. ದೇವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.