ಮಂಡ್ಯ ಜಿಲ್ಲೆಯಿಂದ ಮತ್ತೊಂದು ಯಶಸ್ವಿ ಡೆಕಾಯ್ ಆಪರೇಷನ್..!

KannadaprabhaNewsNetwork |  
Published : Oct 24, 2025, 01:00 AM IST
೨೩ಕೆಎಂಎನ್‌ಡಿ-೧ಮೈಸೂರು ಜಿಲ್ಲೆ ಹುನುಗನಹಳ್ಳಿ ಗ್ರಾಮದ ಒಂಟಿ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಮಾಹಿತಿಯನ್ನು ಆಧರಿಸಿ ಮಂಡ್ಯ ಮತ್ತು ಮೈಸೂರು ಆರೋಗ್ಯಾಧಿಕಾರಿಗಳು ದಾಳಿ ನಡೆಸಿರುವುದು. | Kannada Prabha

ಸಾರಾಂಶ

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಡೆಕಾಯ್ ಆಪರೇಷನ್ ಆರಂಭಿಸಿದ್ದೇ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಈವರೆಗೆ ನಡೆಸಿದ ಎರಡು ಆಪರೇಷನ್‌ಗಳು ಯಶಸ್ಸು ಕಂಡಿದ್ದವು. ಇದೀಗ ಮೂರನೇ ಆಪರೇಷನ್ ಕೂಡ ಸಕ್ಸಸ್ ಆಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಡೆಕಾಯ್ ಆಪರೇಷನ್ ಆರಂಭಿಸಿದ್ದೇ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಈವರೆಗೆ ನಡೆಸಿದ ಎರಡು ಆಪರೇಷನ್‌ಗಳು ಯಶಸ್ಸು ಕಂಡಿದ್ದವು. ಇದೀಗ ಮೂರನೇ ಆಪರೇಷನ್ ಕೂಡ ಸಕ್ಸಸ್ ಆಗಿದೆ. ಮೈಸೂರು ಜಿಲ್ಲೆ ಬನ್ನೂರು ಸಮೀಪದ ಹುನುಗನಹಳ್ಳಿ ಬಳಿಯ ಒಂಟಿ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ಯತ್ನಿಸುತ್ತಿರುವ ಸುಳಿವನ್ನು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಿ ಕಾರ್ಯಾಚರಣೆ ನಡೆಸುವುದರೊಂದಿಗೆ ಆರೋಪಿಗಳನ್ನು ಸೆರೆಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ಭೇರ್ಯ ಹಾಗೂ ಕೆ.ಸಾಲುಂಡಿ ಗ್ರಾಮದಿಂದ ಹೆಣ್ಣು ಭ್ರೂಣ ಹತ್ಯೆ ಮಾಡಿಸಲು ಬಂದಿದ್ದ ಇಬ್ಬರು ಗರ್ಭಿಣಿಯರನ್ನು ರಕ್ಷಣೆ ಮಾಡಿದ್ದಾರೆ. ಹುನುಗನಹಳ್ಳಿ ಗ್ರಾಮದ ಒಂಟಿ ಮನೆಯ ಶ್ಯಾಮಲಾ ಸೇರಿದಂತೆ ಕೆಲವರನ್ನು ಮೈಸೂರು ವರುಣಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ನಾಗಮಂಗಲ ಮತ್ತು ಬಳ್ಳಾರಿ ಮೂಲದ ಗರ್ಭಿಣಿ ಮಹಿಳೆಯರು ನೀಡಿದ ಸುಳಿವನ್ನಾಧರಿಸಿ ಎರಡು ಡೆಕಾಯ್ ಆಪರೇಷನ್‌ನಲ್ಲಿ ಯಶಸ್ಸು ಕಂಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಂಡ ಮೈಸೂರು ಜಿಲ್ಲೆ ಹುನುಗನಹಳ್ಳಿ ಪ್ರಕರಣವನ್ನು ಬೇಧಿಸಿದ ಹಿರಿಮೆಯನ್ನೂ ತನ್ನದಾಗಿಸಿಕೊಂಡು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದೆ.

ಗೊತ್ತಾಗಿದ್ದು ಹೇಗೆ?

ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದ ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯೊಬ್ಬರು ತಪಾಸಣೆಗೆ ಬಂದು ನೋಂದಣಿ ಮಾಡಿಸಿದರು. ಸಾಮಾನ್ಯವಾಗಿ ಗರ್ಭಿಣಿಯರು ೩ ತಿಂಗಳೊಳಗೆ ಬಂದು ನೋಂದಣಿ ಮಾಡಿಸಿ ತಾಯಿ ಕಾರ್ಡ್ ಪಡೆದುಕೊಳ್ಳಬೇಕಿತ್ತು. ನೋಂದಣಿ ಮಾಡಿಸಿದ ಗರ್ಭಿಣಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ವೈದ್ಯಾಧಿಕಾರಿಗಳು ತಡವಾಗಿ ನೋಂದಣಿ ಮಾಡಿಸಲು ಏನು ಕಾರಣವೆಂದು ಪ್ರಶ್ನಿಸಿದಾಗ ಆಕೆ ನನಗೆ ಮೊದಲು ಹೆಣ್ಣು ಮಗುವಿದ್ದು, ಈಗ ಸ್ಕ್ಯಾನಿಂಗ್ ಮಾಡಿಸಿದ ವೇಳೆ ಗಂಡು ಮಗುವಿರುವುದು ಗೊತ್ತಾಗಿದ್ದರಿಂದ ನೋಂದಣಿ ಮಾಡಿಸುತ್ತಿರುವುದಾಗಿ ನಿಜಾಂಶ ಬಾಯ್ಬಿಟ್ಟಳು ಎನ್ನಲಾಗಿದೆ.

ಸ್ಕ್ಯಾನಿಂಗ್ ಮಾಡಿದವರ ಮೊಬೈಲ್ ನಂಬರ್ (೮೭೨೨೨೬೫೧೨೬)ನ್ನು ಆಕೆಯಿಂದ ಪಡೆದುಕೊಂಡರು. ಆಗ ಡೆಕಾಯ್ ಆಪರೇಷನ್ ಕಾರ್ಯಾಚರಣೆಗಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಹಾಗೂ ಇತರರು ಈ ವಿಷಯವನ್ನು ರಾಜ್ಯ ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ದೊರೆ ಹಾಗೂ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರಿಗೆ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿರುವ ಕುರಿತಂತೆ ಸುಳಿವು ನೀಡಿದರು.

ಮೆಲ್ಲಹಳ್ಳಿ ಸರ್ಕಲ್‌ಗೆ ಬರುವಂತೆ ಸೂಚನೆ:

ಆಗ ಪುಟ್ಟಸಿದ್ದಮ್ಮ ಅವರನ್ನು ಈ ಕಾರ್ಯಾಚರಣೆಗೆ ಬಳಸಿಕೊಂಡು ಅವರಿಂದಲೇ ಮಧ್ಯವರ್ತಿ ಸ್ವಾಮಿ ಮೊಬೈಲ್ ೮೭೨೨೨೬೫೧೨೬ ಸಂಖ್ಯೆಗೆ ಕರೆ ಮಾಡಿಸಿ ತನಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿರುವ ನನಗೆ ಗುಪ್ತವಾಗಿ ಭ್ರೂಣಲಿಂಗ ಪತ್ತೆ ಮಾಡಿಸುವಂತೆ ಮಾತನಾಡಿಸಿದರು. ಇದಕ್ಕೆ ಒಪ್ಪಿಕೊಂಡ ಸ್ವಾಮಿ ಅ.೨೨ರಂದು ಮಧ್ಯಾಹ್ನ ೧೨ ಗಂಟೆಗೆ ಪುಟ್ಟಸಿದ್ದಮ್ಮ ಅವರನ್ನು ಮೆಲ್ಲಹಳ್ಳಿ ಸರ್ಕಲ್‌ಗೆ ಬರುವಂತೆ ತಿಳಿಸಿದನು. ಅಲ್ಲಿಂದ ಅವರನ್ನು ಸ್ಕ್ಯಾನಿಂಗ್ ಮತ್ತು ಗರ್ಭಪಾತ ಮಾಡುವ ಸ್ಥಳಕ್ಕೆ ಕರೆದೊಯ್ಯುವುದಾಗಿ ತಿಳಿಸಿದ್ದಾನೆ.

ಒಂಟಿ ಮನೆ ಬಳಿ ನಿಂತಿದ್ದ ವಾಹನ:

ಆ ಸಮಯದಲ್ಲಿ ಪುಟ್ಟಸಿದ್ದಮ್ಮರ ಮೊಬೈಲ್ ಹಾಗೂ ಕಾರ್ಯಾಚರಣೆ ತಂಡದಲ್ಲಿದ್ದ ಡಾ.ದೊರೆ ಅವರ ಮೊಬೈಲ್‌ಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿ ಸ್ವಾಮಿ ಬರುವಿಕೆಗಾಗಿ ಮೆಲ್ಲಹಳ್ಳಿ ಸರ್ಕಲ್‌ನಲ್ಲಿಯೇ ಕಾದು ಕುಳಿತಿದ್ದರು. ಮಧ್ಯಾಹ್ನ ೧.೪೫ರ ವೇಳೆಗೆ ಪುಟ್ಟಸಿದ್ದಮ್ಮರ ಬಳಿ ಸ್ವಾಮಿ ಬಂದು ಮಾತನಾಡಿಕೊಂಡು ಹಣವನ್ನು ಪಡೆದುಕೊಂಡು ಹೊರಟುಹೋದನು. ಸ್ವಲ್ಪ ಸಮಯದ ಬಳಿಕ ಕಾರು (ಟಿಎನ್.೯೯-೭೩೪೫)ಬಂದು ಪುಟ್ಟಸಿದ್ದಮ್ಮರನ್ನು ಕೂರಿಸಿಕೊಂಡು ಕರೆದೊಯ್ಯಿತು. ಈ ವಾಹನವನ್ನು ಹಿಂಬಾಲಿಸಿದಾಗ ಹಾರೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಹುನುಗನಹಳ್ಳಿ ಗ್ರಾಮದ ಅಂಚಿನಲ್ಲಿರುವ ಒಂದು ಮನೆಯ ಬಳಿ ವಾಹನ ನಿಂತಿತು.

30 ಸಾವಿರ ರು. ಪಡೆದಿದ್ದರು:

ಅಲ್ಲಿಗೆ ಆಗಮಿಸಿದ ಡೆಕಾಯ್ ಆಪರೇಷನ್ ತಂಡ ಮನೆಯನ್ನು ಪ್ರವೇಶಿಸಿದರು. ಕೆಳಮಹಡಿಯಲ್ಲಿದ್ದ ಗೋವಿಂದರಾಜು ಎಂಬಾತನನ್ನು ವಿಚಾರಿಸಿದಾಗ ಆತ ಯಾವುದೇ ವಿಚಾರ ಬಾಯಿಬಿಡಲಿಲ್ಲ. ಮೇಲಿನ ಮಹಡಿಗೆ ಹೋದಾಗ ಅಲ್ಲಿ ಪುಟ್ಟಸಿದ್ದಮ್ಮ ಅಲ್ಲದೇ, ಮತ್ತಿಬ್ಬರು ಗರ್ಭಿಣಿ ಹೆಂಗಸರು ಸೇರಿದಂತೆ ೫ ರಿಂದ ೬ ಮಂದಿ ಹೆಂಗಸರು ಮತ್ತು ಮಕ್ಕಳು ಕೊಠಡಿಯಲ್ಲಿದ್ದರು. ನಂತರ ಗರ್ಭಿಣಿ ಹೆಂಗಸರನ್ನು ವಿಚಾರಿಸಿದಾಗ ನಮಗೆ ಈಗಾಗಲೇ ಹೆಣ್ಣು ಮಕ್ಕಳಿದ್ದು ಮತ್ತೊಮ್ಮೆ ಹೆಣ್ಣು ಮಗುವಾದರೆ ತಮ್ಮ ಗಂಡಂದಿರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರೇ ಭ್ರೂಣ ಪತ್ತೆಗೆ ಕರೆತಂದಿದ್ದಾರೆ. ತಲಾ ೩೦ ಸಾವಿರ ರು. ನೀಡಿರುವುದಾಗಿ ಒಪ್ಪಿಕೊಂಡರು.

ಮನೆ ಒಡತಿಯಿಂದಲೇ ಕೃತ್ಯ:

ಈ ಬಗ್ಗೆ ಮನೆಯ ಒಡತಿ ಶ್ಯಾಮಲಾ ಅವರನ್ನು ವಿಚಾರಿಸಿದಾಗ ಆಕೆ ಯಾವುದೇ ವಿಚಾರ ತಮಗೆ ತಿಳಿಯದಂತೆ ವರ್ತಿಸಿದಳು. ನಂತರ ಆಕೆಯನ್ನು ಕೂಲಂಕಷವಾಗಿ ಹೇಳಿದಾಗ ಆಕೆ ಬನ್ನೂರಿನ ಎಸ್.ಕೆ.ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ನಂತರ ಕೊಠಡಿಯನ್ನು ಪರಿಶೀಲಿಸಿದಾಗ ಎಸ್.ಕೆ.ಆಸ್ಪತ್ರೆಗೆ ಸಂಬಂಧಿಸಿದ ಬಿಲ್‌ಗಳು, ಇತರೆ ದಾಖಲೆಗಳು, ಇಂಜೆಕ್ಷನ್, ಮಾತ್ರೆಗಳು ಹಾಗೂ ಹತ್ತಿ ಬಟ್ಟೆಗಳು ಇದ್ದವು. ಶ್ಯಾಮಲಾ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡಿದ್ದು, ಗಂಡ ಕಾರ್ತಿಕ್ ಸಹಕಾರದೊಂದಿಗೆ ಪುಟ್ಟರಾಜು ಎಂಬಾತನೊಂದಿಗೆ ಸೇರಿಕೊಂಡು ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣವು ಹೆಣ್ಣು ಎಂದು ಗುರುತಿಸಿದ್ದಲ್ಲಿ ಗರ್ಭಪಾತ ಮಾಡುವ ಮೂಲಕ ಭ್ರೂಣಹತ್ಯೆ ಮಾಡುವ ಕಾರ್ಯದಲ್ಲಿ ತೊಡಗಿರುವುದಾಗಿ ಒಪ್ಪಿಕೊಂಡಳು ಎಂದು ಪೊಲೀಸರಿಗೆ ನೀಡಿರುವ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ವಿಭಾಗ ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ, ಪ್ರಾಥಮಿಕ ಆರೋಗ್ಯ ಸಮುದಾಯಾಧಿಕಾರಿ ಪುಟ್ಟಸಿದ್ದಮ್ಮ, ಆರೋಗ್ಯ ನಿರೀಕ್ಷಕ ಅಧಿಕಾರಿ ಈಶ್ವರ್ ಅವರು ಭಾಗವಹಿಸಿದ್ದರು.ಸ್ಕ್ಯಾನಿಂಗ್ ಮಾಡುವ ವ್ಯಕ್ತಿ ಬರಲಿಲ್ಲ

ಡೆಕಾಯ್ ಆಪರೇಷನ್‌ಗೆ ಬಳಸಿಕೊಂಡಿದ್ದ ಪುಟ್ಟಸಿದ್ದಮ್ಮ ಸೇರಿದಂತೆ ಇನ್ನಿಬ್ಬರು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಬೇಕಿದ್ದ ವ್ಯಕ್ತಿ ಅಂದು ಮನೆಯ ಬಳಿಗೆ ಬಂದಿರಲಿಲ್ಲ. ಕಾರ್ಯಾಚರಣೆಯ ಸುಳಿವು ಗೊತ್ತಾಗಿ ಆತ ಅಲ್ಲಿಗೆ ಬರದಿರಬಹುದೆಂದು ಅನುಮಾನಿಸಲಾಗಿದೆ. ಆರೋಪಿ ಶ್ಯಾಮಲಾ ಸ್ಕ್ಯಾನಿಂಗ್‌ನ್ನು ಪುಟ್ಟರಾಜು ಎಂಬಾತನ ನೆರವಿನೊಂದಿಗೆ ಮಾಡುತ್ತಿರುವುದಾಗಿ ತಿಳಿಸಿದ್ದಳು.ಡೆಕಾಯ್ ಆಪರೇಷನ್ ನಿಲ್ಲುವುದಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವ ದಂಧೆಗೆ ಕಡಿವಾಣ ಹಾಕಿರುವುದರಿಂದ ಜಿಲ್ಲೆಯ ಗರ್ಭಿಣಿಯರು ಹೊರ ಜಿಲ್ಲೆಗಳಿಗೆ ಹೋಗಿ ನಿಯಮಬಾಹೀರವಾಗಿ ಸ್ಕ್ಯಾನಿಂಗ್, ಗರ್ಭಪಾತ ಮಾಡಿಸಿಕೊಂಡು ಬರುತ್ತಿದ್ದಾರೆ. ೩ ತಿಂಗಳ ನಂತರ ಬರುವ ಗರ್ಭಿಣಿಯರ ಮೇಲೆ ನಿಗಾ ವಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!