ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ನೀರು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದೆ. ಇದರ ಸೊಬಗನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಜನರು ಕುಟುಂಬ ಸಹಿತ ಆಗಮಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ಕಾರಣ ಹಲವಾರು ಕೆರೆ, ಕಟ್ಟೆಗಳು ತುಂಬಿ ಕೋಡಿಯಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ತಾಲೂಕಿನ ದಬ್ಬೇಘಟ್ಟ ಹೋಬಳಿಯ ಓಬ್ಬೇನಾಗಸಂದ್ರ ಗ್ರಾಮದ ಲಲಿತಮ್ಮನವರ ವಾಸದ ಮನೆಯ ಗೋಡೆ ಮಳೆಗೆ ಕುಸಿದು ಬಿದ್ದು ಮನೆಯ ದವಸ, ಧಾನ್ಯ, ಹಾಸಿಗೆ, ಹೊದಿಕೆ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ. ಕಂದಾಯ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಕೊಂಡಜ್ಜಿ ಕ್ರಾಸ್ ಸೊಪ್ಪನಹಳ್ಳಿ ಮಧ್ಯೆದ ಕೊಂಡಜ್ಜಿ ಹಳ್ಳದ ಬಳಿ ನೀರು ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದೆ. ಕಳೆದ ಐದಾರು ವರ್ಷದ ಹಿಂದೆ ಇದೇ ಜಾಗದಲ್ಲಿ ಹಳ್ಳದಾಟುವಾಗ ಕಾರೊಂದು ಕೊಚ್ಚಿ ಹೋಗಿ ಚಾಲಕರೊಬ್ಬರು ಸಾವನ್ನಪ್ಪಿದ್ದರು. ಅನಾಹುತ ಸಂಭವಿಸಿದ್ದರೂ ಸಹ ಇಲ್ಲಿಯ ತನಕ ಸೇತುವೆ ನಿರ್ಮಾಣವಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ನೀರು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದೆ. ಇದರ ಸೊಬಗನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಜನರು ಕುಟುಂಬ ಸಹಿತ ಆಗಮಿಸುತ್ತಿದ್ದಾರೆ. ಅನಾಹುತಗಳು ಆಗುವ ಸಂಭವವಿರುವುದರಿಂದ ಪೊಲೀಸರು ಇಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರಿಗೇಹಳ್ಳಿಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದ್ದು ಈ ಭಾಗಗಳಲ್ಲಿ ಸಂಚರಿಸಲು ವಾಹನ ಸವಾರರು ಹಾಗೂ ಜನರು ಪರದಾಡುವಂತಾಗಿದೆ.ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಹಿನ್ನೀರಿನ ಹರಿವು ರಭಸವಾಗಿರುವ ಕಾರಣ ಮುನಿಯೂರು ಗದ್ದೆ ಬಯಲಿನವರೆವಿಗೂ ನದಿಯಂತೆ ನೀರು ಆವರಿಸಿಕೊಂಡಿದೆ ಜೊತೆಗೆ ಪುರ - ತಾಳಕೆರೆ ಮತ್ತು ಗೋರಾಘಟ್ಟ-ಡಿ.ಕಲ್ಕೆರೆ ಸಂಪರ್ಕಿಸುವ ಸೇತುವೆ ಮೇಲೆ ಶಿಂಷಾ ನದಿ ನೀರು ಹರಿಯುತ್ತಿದೆ.ತುರುವೇಕೆರೆಯ ಕೆರೆ ಸಹ ತುಂಬಿ ಹರಿಯುತ್ತಿರುವ ಕಾರಣ ಸಾಕಷ್ಟು ಜನರು ತಮ್ಮ ಮೊಬೈಲ್‌ನಲ್ಲಿ ಕೋಡಿ ನೀರನ್ನು ಸೆರೆ ಹಿಡಿಯುತ್ತಿರುವುದು ಸಾಮಾನ್ಯವಾಗಿದೆ. ತಾಲೂಕಿನ ಎನ್.ಬಿಸಿ ಮತ್ತು ಟಿಬಿಸಿ ಹೇಮಾವತಿ ನಾಲಾ ವ್ಯಾಪ್ತಿಯ ಸುಮಾರು 19 ಕೆರೆಗಳು ಮಳೆ ಮತ್ತು ನಾಲಾ ನೀರಿಗೆ ತುಂಬಿ ಕೋಡಿ ಬಿದ್ದಿವೆ ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.ತಾಲೂಕಿನ ಕೆಲವಡೆ ಕೊಳವೆ ಬಾವಿಗಳಲ್ಲಿ ತಾನೇಗೇ ನೀರು ಉಕ್ಕುತ್ತಿವೆ ಅಡಿಕೆ, ತೆಂಗಿನ ತೋಟ ಸಾಲು, ಹೊಲ, ಗದ್ದೆ, ಕಟ್ಟೆ ಮತ್ತು ಚೆಕ್ ಡ್ಯಾಂಗಳಲ್ಲಿ ಮಳೆಯ ನೀರು ಸಂಗ್ರಹವಾಗಿದೆ. 23 ಟಿವಿಕೆ 2 - ತುರುವೇಕೆರೆ ತಾಲ್ಲೂಕಿನ ಸಾರಿಗೆಹಳ್ಳಿ ಕೆರೆ ಕೋಡಿ ಬಿದ್ದಿರುವುದು.23 ಟಿವಿಕೆ 3 - ತುರುವೇಕೆರೆ ತಾಲ್ಲೂಕಿನ ಓಬ್ಬೇನಾಗಸಂದ್ರ ಲಲಿತಮ್ಮನವರ ಮನೆಯ ಗೋಡೆ ಕುಸಿದು ಬಿದ್ದಿದೆ.23 ಟಿವಿಕೆ 4 - ತುರುವೇಕೆರೆ ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಹರಿಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.