ಕನ್ನಡಪ್ರಭ ವಾರ್ತೆ ಕೊರಟಗೆರೆಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡದ ಧ್ವಜಸ್ತಂಭ ಸ್ಥಾಪಿಸುವಂತೆ ಇಲ್ಲಿನ ಕೊರಟಗೆರೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್.ನಟರಾಜ್ ಹಾಗೂ ಸೈಫುಲ್ಲಾ ಎಂ.ಎಸ್. ನೇತೃತ್ವದಲ್ಲಿ ಅಮರಣಾ ಉಪವಾಸ ಸತ್ಯಾಗ್ರಹ ಏರ್ಪಡಿಸಲಾಗಿತ್ತು.8 ತಿಂಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮುಂದೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಾಲೂಕು ಆಡಳಿತ 56 ಅಡಿಯ ಕನ್ನಡ ಧ್ವಜಸ್ತಂಭ ತೆರವುಗೊಳಿಸಲಾಗಿತ್ತು. ಆ ಜಾಗ ಬಿಟ್ಟು ಬೇರೆ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಾಲೂಕು ಆಡಳಿತ ಭರವಸೆ ನೀಡಲಾಗಿತ್ತು. ಇಲ್ಲಿವರೆಗೂ ಜಾಗ ಗುರುತಿಸಿಲ್ಲ ಎಂದು ತಾಲೂಕು ಆಡಳಿತ ವಿರುದ್ಧ ಧ್ವಜಸ್ತಂಭ ಮರು ನಿರ್ಮಾಣವಾಗುವವರೆಗೂ ಅಮರಣಾ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.ಸುಮಾರು 8 ತಿಂಗಳಿಂದ ಜಾಗವನ್ನು ಗುರುತಿಸಿಲ್ಲ ಹಾಗೂ ನವೆಂಬರ್ ತಿಂಗಳು ಆಗಮಿಸುತ್ತಿರುವದರಿಂದ ನ. 1 ರಂದು ಧ್ವಜಾರೋಹಣ ಮಾಡಬೇಕು ಎಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಮುಂದೆ ಮಳೆ ಬಂದರೂ ಪ್ರತಿಭಟನೆ ನಿಲ್ಲಿಸದ ಕರವೇ ಕಾರ್ಯಕರ್ತರ ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಅವರು ಭೇಟಿ ನೀಡಿ ಕರವೇ ಕಾರ್ಯಕರ್ತರ ಜೊತೆ ಮಾತನಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅವರಣದಲ್ಲಿ ಜಾಗವನ್ನು ಗುರುತಿಸಲಾಗಿದೆ. ಅದಷ್ಟು ಬೇಗ ಧ್ವಜಸ್ತಂಭ ನಿರ್ಮಾಣ ಮಾಡಲಾಗುವುದು ಎಂದು ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶ್ವಸಿಯಾಗಿ ಪ್ರತಿಭಟನೆ ಅಂತ್ಯಗೊಳಿಸಿದರು.ಕೊರಟಗೆರೆ ಕರವೇ ಅಧ್ಯಕ್ಷ ಕೆ.ಎನ್. ನಟರಾಜ್ ಮಾತನಾಡಿ, ಜಿಲ್ಲೆಯಲ್ಲೇ 56 ಅಡಿ ಅತಿ ಎತ್ತರದ ಧ್ವಜಸ್ತಂಭವನ್ನು ರಾತ್ರೋರಾತ್ರಿ ನಾಕಾಬಂದಿ ಹಾಕಿ ಧ್ವಂಸಗೊಳಿಸಿದ ತಾಲೂಕು ಆಡಳಿತದ ವಿರುದ್ಧ ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ್ರು ಕೊರಟಗೆರೆಗೆ ಬಂದು ಪ್ರತಿಭಟನೆ ಮಾಡಿ ಧ್ವಜಸ್ತಂಭ ಮರು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.