ಯತೀಂದ್ರ ಬಾಲಿಶ ಹೇಳಿಕೆ ನೀಡದಿರಲಿ: ಶಿವಗಂಗಾ

KannadaprabhaNewsNetwork |  
Published : Oct 24, 2025, 01:00 AM IST
23ಕೆಡಿವಿಜಿ6-ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ. | Kannada Prabha

ಸಾರಾಂಶ

ಸಿದ್ದರಾಮಯ್ಯನವರ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದೇ ರೀತಿ ನಾನೂ ನಾಳೆ ಹೇಳಿಕೆ ನೀಡಬೇಕಾಗುತ್ತದೆ. ನನ್ನ ನೋಡಿ ಮತ್ತಿನ್ಯಾರೋ ಹೇಳಿಕೆ ನೀಡುತ್ತಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಯತೀಂದ್ರ ಬಾಲಿಶ ಹೇಳಿಕೆ ನೀಡಬಾರದು ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ.ಶಿವಗಂಗಾ ದಾವಣಗೆರೆಯಲ್ಲಿ ಕಿಡಿಕಾರಿದ್ದಾರೆ.

- ನಮ್ಮದು ಮೈಸೂರು ರಾಜಮನೆತನವಲ್ಲ: ಸಿಎಂ ಪುತ್ರಗೆ ಟಾಂಗ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿದ್ದರಾಮಯ್ಯನವರ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದೇ ರೀತಿ ನಾನೂ ನಾಳೆ ಹೇಳಿಕೆ ನೀಡಬೇಕಾಗುತ್ತದೆ. ನನ್ನ ನೋಡಿ ಮತ್ತಿನ್ಯಾರೋ ಹೇಳಿಕೆ ನೀಡುತ್ತಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಯತೀಂದ್ರ ಬಾಲಿಶ ಹೇಳಿಕೆ ನೀಡಬಾರದು ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ.ಶಿವಗಂಗಾ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ ಮನೆತನವಾದರೆ ರಾಜರಿಗೆ ಮಕ್ಕಳು ಇರುತ್ತಾರೆ. ಅಂತಹವರಿಗೆ ವಂಶ ಪಾರಂಪರ್ಯವಾಗಿ ಮುಂದಿನ ಉತ್ತರಾಧಿಕಾರಿ ಅಂತಾ ಆಗುತ್ತಾರೆ. ಆದರೆ, ಅಂತಹ ವ್ಯವಸ್ಥೆ ಕಾಂಗ್ರೆಸ್‌ ಪಕ್ಷದಲ್ಲಿಲ್ಲ. ಮುಖ್ಯಮಂತ್ರಿ ಉತ್ತರಾಧಿಕಾರಿ ಯಾರು? ಮುಖ್ಯಮಂತ್ರಿ ಯಾರು ಎಂಬ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರಬೇಕು ಎಂದರು.

ಹೈಕಮಾಂಡ್‌ ಗಮನಹರಿಸಲಿ:

ಡಿಸಿಎಂ ಡಿ.ಕೆ.ಶಿವಕುಮಾರ ಸಾಹೇಬರು 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆಂದು ಹೇಳಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು, ಕಾಂಗ್ರೆಸ್ ಪಕ್ಷದವರೇ ಮುಖ್ಯಮಂತ್ರಿ ಆಗಬೇಕು. ಮುಂದಿನ ಮುಖ್ಯಮಂತ್ರಿ ವಿಷಯವಾಗಿ ನಾನು ಮಾತನಾಡಿಲ್ಲ. ಆದರೂ, ನನಗೆ ನೋಟಿಸ್ ನೀಡಿದ್ದಾರೆ. ಮುಖ್ಯಮಂತ್ರಿ ವಿಷಯ ಅಷ್ಟೇ ನಾನು ಮಾತನಾಡಿದ್ದೆ. ನವೆಂಬರ್ ಕ್ರಾಂತಿ ಅಂತಲೇ ಎಲ್ಲರೂ ಹೇಳುತ್ತಾರೆ. ಆದರೆ, ನಾನು ಡಿಸೆಂಬರ್‌ ಅಂತಾ ಹೇಳುತ್ತೇನೆ. ಡಿಸೆಂಬರ್ ನಂತರ ಜನವರಿಯಲ್ಲಿ ನಾನು ಮಾತನಾಡುತ್ತೇನೆ ಎಂದರು.

ಎರಡು ಇದ್ದರೂ, ಮೂರು ಇದ್ದರೂ ನಾಮವೇ:

ಡಿ.ಕೆ.ಶಿವಕುಮಾರ, ನಾವು ವಿಭೂತಿ ಹಚ್ಚುತ್ತೇವೆ, ನಾಮ ಹಚ್ಚುತ್ತೇವೆ. ಎರಡೂ ಇದ್ದರೂ ನಾಮ, ಮೂರು ಇದ್ದರೂ ನಾಮವೆ. ನಾವು ಯಾವ ದೇವರಿಗೆ ಹೋಗುತ್ತೇವೋ ಅಲ್ಲಿನ ಪದ್ಧತಿಯಂತೆ ಅಡ್ಡವಾಗಿ ವಿಭೂತಿಯಲ್ಲಿ, ನೇರವಾಗಿ ನಾಮ ಧರಿಸುತ್ತೇನೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ಡಿ.ಕೆ.ಶಿವಕುಮಾರ ಟೆಂಪಲ್ ರನ್ ಅಂತಾ ಟೀಕಿಸುತ್ತಿದ್ದಾರೆ. ನಾನೂ ಟೆಂಪಲ್‌ಗೆ ನಿರಂತರ ಹೋಗುವವರು. ಟೆಂಪಲ್‌ಗೆ ಹೋದರೆ ಮುಖ್ಯಮಂತ್ರಿ ಆಗುವುದಾದರೆ ನಾನು ಇವಾಗಿನಿಂದಲೇ ನಿರಂತರ ಟೆಂಪಲ್ ರನ್ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಜಾರಕಿಹೊಳಿಗೆ ಸಿಎಂ ಆಗುವ ಅರ್ಹತೆ:

ಸತೀಶ ಜಾರಕಿಹೊಳಿ ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಸ್ವತಃ ಜಾರಕಿಹೊಳಿಯವರೇ 2033ಕ್ಕೆ ತಾವು ಸಿಎಂ ಸ್ಥಾನದ ಆಕಾಂಕ್ಷಿಯೆಂದು ಹೇಳಿದ್ದಾರೆ. ಅದಕ್ಕೆ ನನ್ನ ಬೆಂಬಲೂ ಇದೆ. ಈಗಲೇ ನಾನು ಸಿಎಂ ಸ್ಥಾನದ ಆಕಾಂಕ್ಷಿಯೆಂದು ಕ್ಲೇಮ್ ಮಾಡಿದರೆ ನಾನು ಏನಾದರೂ ಹೇಳುವುದು ಸರಿಯಲ್ಲ. ಹೇಳುವುದೂ ಬೇಕಾಗಿಲ್ಲ. ಸ್ವತಃ ಸತೀಶ ಜಾರಕಿಹೊಳಿಯವರೇ ಡಿ.ಕೆ.ಶಿವಕುಮಾರ ಪಕ್ಷ ಕಟ್ಟಿದ್ದಾರೆಂದು ಹೇಳಿದ್ದಾರೆ ಎಂದು ಬಸವರಾಜ ಶಿವಗಂಗಾ ತಿಳಿಸಿದರು.

- - -

(ಕೋಟ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಏನಾದರೂ ಹೇಳಿಕೆ ನೀಡಿದ್ದಾರಾ? ನಾನು ಮುಖ್ಯಮಂತ್ರಿ ಇದ್ದೇನೆಂದು ಹೇಳಿದ್ದಾರೆ. ಆದರೆ, ಇಳಿಯುವುದಿಲ್ಲ ಅಂತೇನಾದರೂ ಹೇಳಿದ್ದಾರಾ? ಮಾಧ್ಯಮದವರು ಗೊಂದಲ ಹುಟ್ಟು ಹಾಕಬೇಡಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ 2033ಕ್ಕೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತಾ ಸ್ಪಷ್ಟವಾಗಿ ಹೇಳಿದ್ದಾಗಲೂ ಯತೀಂದ್ರ ಸಿದ್ದರಾಮಯ್ಯ ಮತ್ತೆ ಅದೇ ವಿಚಾರದಲ್ಲಿ ಗೊಂದಲ ಮೂಡಿಸುವುದೇಕೆ?

- ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.

- - -

-23ಕೆಡಿವಿಜಿ6: ಬಸವರಾಜ ವಿ.ಶಿವಗಂಗಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!