- ಸತೀಶ ಜಾರಕಿಹೊಳಿ ಮನೆಗೆ ಕಳಿಸಿ ಹೇಳಿಕೆ ಕೊಡಿಸಿದ್ದೇ ಸಿಎಂ: ಅಶೋಕ್
ಕನ್ನಡಪ್ರಭ ವಾರ್ತೆ ದಾವಣಗೆರೆ ಯತೀಂದ್ರ ಅವರನ್ನು ಬೆಳಗಾವಿಗೆ ಕಳಿಸಿ, ಸತೀಶ ಜಾರಕಿಹೊಳಿ ಮನೆಯಲ್ಲೇ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಅಂತಾ ಸಿದ್ದರಾಮಯ್ಯನವರೇ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ 2 ನಾಮಗಳ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿದ್ದ ಡಿ.ಕೆ.ಶಿವಕುಮಾರಗೆ ಯತೀಂದ್ರ 3ನೇ ನಾಮ ಹಾಕಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಬದಲಿಗೆ ಎರಡು ನಾಮ ಹಾಕಿಕೊಂಡು, ಟೆಂಪಲ್ ರನ್ ಮಾಡುತ್ತಿದ್ದರು. ಅವರಿಗೆ ಯತೀಂದ್ರ ಸಿದ್ದರಾಮಯ್ಯ ಮೂರನೇ ನಾಮಹಾಕಿದ್ದಾರೆ. ಡಿ.ಕೆ.ಶಿವಕುಮಾರಗೆ ಸಿದ್ದರಾಮಯ್ಯ ನಾಮ ಹಾಕುವುದು ಪಕ್ಕಾ ಆಗಿದ್ದು, ಡಿಕೆಶಿ ಈಗ ದಾರಿ ತಪ್ಪಿದ ಮಗನಾಗಿದ್ದಾರೆ ಎಂದ ಅವರು, ಟೆಂಪಲ್‌ಗಿಂತಲೂ ಕಾಂಗ್ರೆಸ್ ಪಕ್ಷದ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ಅನ್ನು ಡಿ.ಕೆ.ಶಿವಕುಮಾರ ಸುತ್ತಬೇಕು. ಇಟಲಿ ಟೆಂಪಲ್ ಸುತ್ತಿ, ಕಪ್ಪ ಕಾಣಿಗೆ ನೀಡಿದರೆ ಮಾತ್ರವೇ ನೀವು ಮುಖ್ಯಮಂತ್ರಿ ಆಗುತ್ತೀರಿ ಎಂದು ಟೀಕಿಸಿದರು.ನಾನು ನ.16ರ ಕ್ರಾಂತಿ ಅಂದಾಗ ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆಂದು ಡಿ.ಕೆ.ಶಿವಕುಮಾರ ಹೇಳಿದ್ದರು. ಈಗ ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ ಹೇಳಿದಾಗ ಕಾಂಗ್ರೆಸ್ಸಿನವರಿಗೆ ಸರಿಯಾಗಿದೆ ಅನಿಸುತ್ತಿದೆ. ತುಮಕೂರಿನ ಕೆ.ಎನ್.ರಾಜಣ್ಣ ನವೆಂಬರ್ ಕ್ರಾಂತಿ ಅಂದಾಗ ಪಾಪ ಬೋರ್ಡ್ ಸಹ ಇಲ್ಲದಂತೆ ಓಡಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಸಚಿವರನ್ನು ಸಿಎಂ ಸಿದ್ದರಾಮಯ್ಯ ಡಿನ್ನರ್ ಪಾರ್ಟಿಗೆ ಕರೆದಿದ್ದರು. ಅದು ಡಿನ್ನರ್ ಪಾರ್ಟಿ ಅಲ್ಲ, ಬಿಹಾರ್ ಚುನಾವಣೆಗೆ ಕಲೆಕ್ಷನ್ ಪಾರ್ಟಿಯಾಗಿತ್ತು. ಯಾವ್ಯಾವ ಸಚಿವರು ಎಷ್ಟು ಕೊಡುತ್ತೀರಾ ಅಂತಾ ಹೇಳಿದ್ದೇ ತಡ ಕೆಲವರು ಊಟ ಮಾಡದೇ ಓಡಿಹೋದರಂತೆ ಎಂದು ಅಶೋಕ್ ಹೇಳಿದರು.
ಮುತ್ತಾತನ ಕಾಲದಿಂದಲೂ ಆರೆಸ್ಸೆಸ್ ಇದೆ:
ಕಾಂಗ್ರೆಸ್‌ನ ತಾತಾ, ಮುತ್ತಾತನ ಕಾಲದಿಂದಲೂ ಆರೆಸ್ಸೆಸ್ ಇದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಕಾರ ಎತ್ತಲಿಲ್ಲ. ಈಗ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ₹33 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ಮಾಡಬೇಕಾಗಿದೆ. ನಮ್ಮ ಸರ್ಕಾರದಲ್ಲಿ ಕೆಂಪಣ್ಣ ಎಂಬಾತನನ್ನು ತಂದು, ಆರೋಪ ಮಾಡಿಸಿದ್ದರು. ಯಾವ ಕೋರ್ಟ್‌ನಲ್ಲೂ ಕೇಸ್ ಸಹ ನಿಲ್ಲಲಿಲ್ಲ. ಸಾಕ್ಷಿ ಹೇಳುವುದಕ್ಕೂ ಯಾರೂ ಬರಲಿಲ್ಲ ಎಂದರು.- - -
- ಆರ್.ಅಶೋಕ, ಬಿಜೆಪಿ ಮುಖಂಡ.
- - --23ಕೆಡಿವಿಜಿ2, 3: