ಆರೆಸ್ಸೆಸ್‌ ಬಗೆಗಿನ ತಪ್ಪು ಅಭಿಪ್ರಾಯ ನಿವಾರಿಸುತ್ತೇವೆ

KannadaprabhaNewsNetwork |  
Published : Oct 24, 2025, 01:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಪ್ರಜಾಪ್ರಭುತ್ವವನ್ನೇ ಜೈಲಿಗೆ ಹಾಕಿದ್ದ, ಸಂವಿಧಾನವನ್ನೇ ಐಸಿಯುನಲ್ಲಿಟ್ಟ ಕಾಂಗ್ರೆಸ್ಸಿಗೆ ಕೆಲವು ಹಳೇ ಚಾಳಿಗಳಿವೆ. ಅವು ಆಗಾಗ ಮರುಕಳಿಸುತ್ತವೆ. ಹುಣ್ಣಿಮೆ, ಅಮಾವಾಸ್ಯೆ ಬಂದಾಗ ಕೆಲವರಿಗೆ ಕೆದರುತ್ತಂತೆ, ಹಾಗಾಗಿ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಕುಟುಕಿದ್ದಾರೆ.

- ಕಾಂಗ್ರೆಸ್‌ನವರಿಗೆ ಶಾಶ್ವತವಾಗಿ ಯಾವುದನ್ನೂ ಮಾಡುವುದಕ್ಕೆ ಆಗುವುದಿಲ್ಲ: ವಿಪ ಸದಸ್ಯ ಸಿ.ಟಿ.ರವಿ ಟೀಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಜಾಪ್ರಭುತ್ವವನ್ನೇ ಜೈಲಿಗೆ ಹಾಕಿದ್ದ, ಸಂವಿಧಾನವನ್ನೇ ಐಸಿಯುನಲ್ಲಿಟ್ಟ ಕಾಂಗ್ರೆಸ್ಸಿಗೆ ಕೆಲವು ಹಳೇ ಚಾಳಿಗಳಿವೆ. ಅವು ಆಗಾಗ ಮರುಕಳಿಸುತ್ತವೆ. ಹುಣ್ಣಿಮೆ, ಅಮಾವಾಸ್ಯೆ ಬಂದಾಗ ಕೆಲವರಿಗೆ ಕೆದರುತ್ತಂತೆ, ಹಾಗಾಗಿ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಕುಟುಕಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಶಾಶ್ವತವಾಗಿ ಯಾವುದನ್ನೂ ಮಾಡುವುದಕ್ಕೆ ಆಗುವುದಿಲ್ಲ. ಅದರ ಬಗ್ಗೆ ಚಿಂತೆ ಮಾಡುವುದಕ್ಕೂ ಆಗುವುದಿಲ್ಲ. ಆದರೆ, ಸಂಘ ತನ್ನ ಕೆಲಸ ತಾನು ಮಾಡುತ್ತದೆ. ಆರೆಸ್ಸೆಸ್ ರಾಷ್ಟ್ರೀಯ ಭಾವನೆ ಬೆಳೆಸುವ ಕೆಲಸ ಮಾಡುತ್ತಿದೆ. ಕೆಲವರಿಗೆ ಈ ಬಗ್ಗೆ ತಪ್ಪು ಅಭಿಪ್ರಾಯವಿದ್ದು, ಅದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪೂರ್ವಾಗ್ರಹ ಪೀಡಿತರ ಮನಸ್ಥಿತಿ ಬದಲಿಸಲಾಗುವುದಿಲ್ಲ. ಹಾಗಾಗಿ ಅಂತಹವರ ಬಗ್ಗೆ ಸಂಘವು ತಲೆಕೆಡಿಸಿಕೊಳ್ಳದೇ, ಕೆಲಸ ಮಾಡುತ್ತದೆ. ಆರೆಸ್ಸೆಸ್ ಅಂದ್ರೇನು? ಅದೊಂದು ರಾಷ್ಟ್ರೀಯ ವಿಚಾರ. ಅದರ ಪದ್ಧತಿಯೆಂದರೆ ರಾಷ್ಟ್ರಭಕ್ತಿ, ಸಮಾಜಮುಖಿ ಚಿಂತನೆಗಳ ಸಂಸ್ಕಾರ ನೀಡುವುದು, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವವೆಂಬ ವಿಚಾರ ಬಿತ್ತುವುದು, ಸಾಮಾಜಿಕ ಸದ್ಭಾವನೆಗಳನ್ನು ಬೆಳೆಸುವ ಕೆಲಸ ಮಾಡುವುದು, ಜಾತೀಯತೆ, ಅಸ್ಪೃಶ್ಯತೆಗೆ ಅವಕಾಶ, ಜಾಗ ಇಲ್ಲದಂತೆ ಸಮಾಜ ನಿರ್ಮಾಣ ಮಾಡಬೇಕೆಂಬುದಾಗಿದೆ ಎಂದು ತಿಳಿಸಿದರು.

ಪರಂಪರೆಯ ಶ್ರೇಷ್ಠ ವ್ಯಕ್ತಿಗಳನ್ನು ಆಧರಿಸಿ, ಅಂತಹವರಿಂದ ಪ್ರೇರಣೆ ಪಡೆಯುವುದು, ಇತಿಹಾಸದಲ್ಲಿ ಆಗಿಹೋಗಿರುವ ಶ್ರೇಷ್ಠ ವ್ಯಕ್ತಿಗಳಿಂದ ಪ್ರೇರಣೆ ಪಡೆಯುುವುದನ್ನು ನಿರ್ಬಂಧಿಸಿದರೆ ರಾಷ್ಟ್ರವಾದರೂ ಎಲ್ಲಿ ಉಳಿಯುತ್ತದೆ? ರಾಷ್ಟ್ರವೆನ್ನುವುದು ಭೂಮಿಯ ತುಂಡು, ಜಮೀನಿನ ತುಂಡು ಅಲ್ಲ. ಅದರ ಹಿಂದೆ ರಾಷ್ಟ್ರೀಯ ಭಾವನೆ ಇರಬೇಕಾಗುತ್ತದೆ. ರಾಷ್ಟ್ರೀಯ ಭಾವನೆ ಯಾರಾದರೂ ನಿಯಂತ್ರಿಸಲು ಮುಂದಾದರೆ ಅದು ಆಗುವುದಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದರು.

ಈ ಸಂದರ್ಭ ವಿಪಕ್ಷ ನಾಯಕ ಆರ್.ಅಶೋಕ, ಮಾಜಿ ಸಚಿವ ಬಿ.ಸಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರು ಇದ್ದರು.

- - -

(ಬಾಕ್ಸ್‌)

* ರಾಜಕೀಯ ವಾರಸುದಾರಿಗೆ ಜನ ನೀಡಬೇಕು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಮ್ಮ ಮಾಲೀಕರು. ಉತ್ತರಾಧಿಕಾರಿಗಳು ಯಾರು ಆಗಬೇಕೆಂದು ಜನ ನಿರ್ಧರಿಸಬೇಕಿದೆ. ಜನರು ಆಶೀರ್ವಾದ ಮಾಡಿದವರಿಗೆ ವಾರಸುದಾರಿಕೆ ಸಿಗುತ್ತದೆ. ನಮ್ಮ ಅಪ್ಪನ ಆಸ್ತಿ ಪಾಲು ಮಾಡಿದಾಗ ವಾರಸುದಾರಿಕೆ ಬರುತ್ತದೆ. ಆದರೆ, ರಾಜಕೀಯದಲ್ಲಿ ಉತ್ತರಾಧಿಕಾರಿ ನೇಮಕ ಹೇಗೆ ಮಾಡುತ್ತೀರಾ ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಆಸ್ತಿಗೆ ಯತೀಂದ್ರ ಸಿದ್ದರಾಮಯ್ಯ ಉತ್ತರಾಧಿಕಾರಿ ಆಗಬಹುದು ಅಥವಾ ಸಿದ್ದರಾಮಯ್ಯ ತಮ್ಮ ಆಸ್ತಿಯನ್ನು ಯಾರಿಗಾದರೂ ದಾನ ಮಾಡಬಹುದು. ಆದರೆ, ರಾಜಕೀಯ ವಾರಸುದಾರಿಕೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮಾತ್ರ ನೀಡಬೇಕು ಎಂದರು.

- - -

(ಕೋಟ್‌) ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ವಿಚಾರವಾಗಿ ಪ್ರಶ್ನಿಸಿದ್ದೀರಿ. ಕೆಲವೊಂದು ವಿಚಾರಗಳನ್ನು ಕಾಲವೇ ನಿರ್ಣಯ ಮಾಡುತ್ತದೆ. ಕಾಲ ಬರುವವರೆಗೂ ನಾವೂ ಕಾಯಬೇಕಾಗುತ್ತದೆ. ಯಾವುದನ್ನೂ ಹೇಳುವ ಕಾಲ ಇದಲ್ಲ.

- ಸಿ.ಟಿ.ರವಿ, ವಿಪ ಸದಸ್ಯ.

- - -

(ಸಾಂದರ್ಭಿಕ ಚಿತ್ರ)

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ