ಗೋವುಗಳ ಮಹತ್ವದ ಬಗ್ಗೆ ಜನಜಾಗೃತಿ ಅಗತ್ಯ

KannadaprabhaNewsNetwork |  
Published : Oct 24, 2025, 01:00 AM IST
ಹೊನ್ನಾಳಿ ಫೋಟೋ 23ಎಚ್.ಎಲ್.ಐ1.  ಪಟ್ಟಣದ ಕೋಟೆ ಶಂಕರಮಠದಲ್ಲಿ ತಾಲೂಕು ಗೋರಕ್ಷಾ ಪರಿಷತ್ ವತಿಯಿಂದ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಜಿಲ್ಲಾ ಗೋರಕ್ಷಾ ಪರಿಷತ್ತಿನ ಜಿಲ್ಲಾ ಮುಖಂಡ ವಕೀಲ ಉಮಾಕಾಂತ್ ಜೋಯ್ಸ್,  ಇತರರು ಇದ್ದರು.  | Kannada Prabha

ಸಾರಾಂಶ

ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ದೇವಾಸ್ಥಾನಗಳಲ್ಲಿ ಕಡ್ಡಾಯ ಹಾಗೂ ಶಾಸ್ತ್ರೋಕ್ತವಾಗಿ ಗೋಪೂಜೆ ಮಾಡಬೇಕೆಂದು ನಮ್ಮ ಸರ್ಕಾರ ಆದೇಶ ಮಾಡಿದೆ. ಅದರಂತೆ ಬಲಿಪಾಡ್ಯಮಿಯಂದು ಎಲ್ಲ ದೇವಸ್ಥಾನಗಳಲ್ಲಿ ಗೋಪೂಜೆಗೆ ಕ್ರಮ ಜರುಗಿಸಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಕೋಟೆ ಶಂಕರ ಮಠದಲ್ಲಿ ಗೋಪೂಜಾ ಕಾರ್ಯಕ್ರಮದಲ್ಲಿ ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ದೇವಾಸ್ಥಾನಗಳಲ್ಲಿ ಕಡ್ಡಾಯ ಹಾಗೂ ಶಾಸ್ತ್ರೋಕ್ತವಾಗಿ ಗೋಪೂಜೆ ಮಾಡಬೇಕೆಂದು ನಮ್ಮ ಸರ್ಕಾರ ಆದೇಶ ಮಾಡಿದೆ. ಅದರಂತೆ ಬಲಿಪಾಡ್ಯಮಿಯಂದು ಎಲ್ಲ ದೇವಸ್ಥಾನಗಳಲ್ಲಿ ಗೋಪೂಜೆಗೆ ಕ್ರಮ ಜರುಗಿಸಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಕೋಟೆ ಶಂಕರ ಮಠದಲ್ಲಿ ತಾಲೂಕು ಗೋರಕ್ಷಾ ಪರಿಷತ್ತು ವತಿಯಿಂದ ಬುಧವಾರ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂದು ಕರೆಯುವುದಲ್ಲದೇ, ಭಕ್ತಿಯಿಂದ ಪೂಜಿಸಲಾಗುತ್ತದೆ. ಹಾಗಾಗಿ ನಮ್ಮ ಸರ್ಕಾರ ಕೂಡ ಬಲಿಪಾಡ್ಯಮಿಯಂದು ಗೋಪೂಜೆ ಮಾಡಬೇಕೆಂದು ನಿರ್ಧರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದರು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ಅಂಗವಾಗಿರುವ ಗೋವುಗಳ ಮಹತ್ವ ಹಾಗೂ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಗೋವು ನಮ್ಮ ಕುಟುಂಬದ ಸದಸ್ಯನಿದ್ದಂತೆ. ಮನೆಯ ಸದಸ್ಯ ಹೇಗೆ ದುಡಿದು ಕುಟುಂಬದ ನಿರ್ವಹಣೆ ಮಾಡುತ್ತಾರೋ ಹಾಗೆಯೇ ಒಂದು ಹಸು ಕೂಡ ಒಂದು ಕುಟುಂಬದ ನಿರ್ವಹಣೆಗೆ ಬೇಕಾದ ಆರ್ಥಿಕ ಸದೃಢತೆ ನೀಡುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸನಾತನ ಧಾರ್ಮಿಕ ಪರಂಪರೆಯಲ್ಲಿ ಹಿಂದಿನ ಋಷಿಮುನಿಗಳು, ಸಂತರು, ಶರಣರು, ದಾರ್ಶನಿಕರು ಗೋಮಾತೆಗೆ ವಿಶೇಷ ಆದ್ಯತೆ ನೀಡಿ ದೇವಾನುದೇವತೆಗಳ ದೈವಸ್ವರೂಪವೆಂದು ತಿಳಿದು ಆರಾಧನೆಗೈಯುತ್ತಿದ್ದರು. ಗೋಮಾತೆ ಎನ್ನುವುದು ಜಾತ್ಯತೀತವಾದುದು. ಎಲ್ಲವನ್ನು ನೀಡುವ ಕಾಮಧೇನು. ಆರೋಗ್ಯಕ್ಕೆ ಹಾಲು, ಕೃಷಿಗೆ ಗೊಬ್ಬರ, ದುಡಿಮೆ ಹೀಗೆ ಪ್ರತಿಯೊಂದನ್ನು ಗೋವುಗಳು ನೀಡುತ್ತವೆ. ಕೇವಲ ಧಾರ್ಮಿಕ ದೃಷ್ಟಿಯಿಂದ ಗೋವುಗಳ ಸಂರಕ್ಷಣೆಯಾದರೆ ಸಾಲದು. ಮಾನವೀಯತೆ ದೃಷ್ಠಿಯಿಂದಲೂ ನೋಡಬೇಕಾದುದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸುಮಾ ರೇಣುಕಾಚಾರ್ಯ, ಆರೆಸ್ಸೆಸ್‌ನ ಎಚ್.ಎಂ. ಅರುಣ್‌ಕುಮಾರ್ ಹಾಗೂ ಇತರರು ಗೋವಿಗೆ ಪೂಜೆ ಸಲ್ಲಿಸಿ, ಅಕ್ಕಿ, ಬೆಲ್ಲ ಹಾಗೂ ಹಣ್ಣುಗಳನ್ನು ಗೋವಿಗೆ ನೀಡಿದರು.

ಸಂಘದ ಅರುಣ್‌ಕುಮಾರ್, ವಕೀಲ ಎಸ್.ಎನ್. ಪ್ರಕಾಶ್, ಲಕ್ಷ್ಮಣ್ ಜೋಯ್ಸ್, ಮನೋಹರ್ ಜೋಯ್ಸ್ ಮುಖಂಡ ಎಚ್.ಎ. ಉಮಾಪತಿ, ಸತ್ಯನಾರಾಯಣ ರಾವ್, ಲಲಿತಾ ಎಸ್. ಭಾರ್ಗವ, ಕುಮಾರ್, ಮಹೇಶ್ ಹುಡೇದ್, ಹಳದಪ್ಪ ಹಾಗೂ ಇತರರು ಇದ್ದರು.

- - -

(ಕೋಟ್) ಪ್ರಾಚೀನ ಕಾಲದಿಂದಲ್ಲೂ ಗೋವುಗಳನ್ನು ಸಾಕುವುದು ಸಮೃದ್ಧಿಯ ಸಂಕೇತವಾಗಿತ್ತು. 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋವನ್ನು ಪೂಜಿಸುವುದರಿಂದ ಸಕಲ ಪಾಪವೂ ನಿವಾರಣೆಯಾಗುತ್ತದೆ. ಗೋಗ್ರಾಸ ಕೊಡುವುದರಿಂದ ಮಹಾನೈವೇದ್ಯ ಸಮರ್ಪಣೆಯ ಫಲ ಸಿಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ.

- ಉಮಾಕಾಂತ್ ಜೋಯ್ಸ್, ಮುಖಂಡ, ಜಿಲ್ಲಾ ಗೋರಕ್ಷಾ ಪರಿಷತ್ತು.

- - -

-23ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಕೋಟೆ ಶಂಕರ ಮಠದಲ್ಲಿ ತಾಲೂಕು ಗೋರಕ್ಷಾ ಪರಿಷತ್ತು ವತಿಯಿಂದ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಗೋರಕ್ಷಾ ಪರಿಷತ್ತಿನ ಜಿಲ್ಲಾ ಮುಖಂಡ ವಕೀಲ ಉಮಾಕಾಂತ್ ಜೋಯ್ಸ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!