ದೊಡ್ಡಬಳ್ಳಾಪುರ: ಬಡವರು, ಹಿಂದುಳಿದವರು, ಮಕ್ಕಳು ಮಹಿಳೆಯರು ಸೇರಿದಂತೆ ಪ್ರತಿಯೋಬ್ಬರಿಗೂ ಸಕಾಲದಲ್ಲಿ ಸಾಮಾನ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೀತೇಂದ್ರ ಕುಮಾರ್ ಮಹೇಶ್ವರಿ ಹೇಳಿದರು.
ಪ್ರತಿಯೊಬ್ಬ ನಾಗರೀಕರು ಕಾನೂನಿನ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು, ಕಾನೂನು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ನ್ಯಾಯಾಲಯವು ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಲಿದೆ. ಹಾಗಾಗಿ ಎಲ್ಲರಿಗೂ ಕಾನೂನು ಅರಿವು ಮುಖ್ಯ ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ಅರಿವಿರಲಿ:ನ್ಯಾಯಾಲಯವು ಸಾರ್ವಜನಿಕರು ನೀಡುವ ದೂರುಗಳಿಗೆ ಸೂಕ್ತ ನ್ಯಾಯ ಒದಗಿಸುತ್ತದೆ. ಹಾಗೆಯೇ ಜನಸಾಮಾನ್ಯರು ಕೂಡ ತಮ್ಮ ಸಾಮಾಜಿಕ ನ್ಯಾಯ, ಜವಾಬ್ದಾರಿ ಬಗ್ಗೆ ತಿಳಿದಿರಬೇಕು. ಅಸಮಾನತೆ ಹೋಗಲಾಡಿಸುವುದು, ವೈವಿದ್ಯತೆ ಕಾಪಾಡುವುದು, ಸಮಾನ ಅವಕಾಶ ಕಲ್ಪಿಸುವುದು, ಹಕ್ಕುಗಳ ರಕ್ಷಣೆ ನಮ್ಮ ಜವಾಬ್ದಾರಿ ಆಗಿದೆ. ಇವುಗಳನ್ನು ಅರಿತು ಸಮಾಜದಲ್ಲಿ ನಾವು ಜೀವನ ನಡೆಸಬೇಕು ಎಂದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕ ಶೈಲಿ, ಹೊಸ ನಾವೀನ್ಯತೆ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಲೋಕಾದಲತ್ ಜಾರಿಗೆ ತರಲಾಯಿತು. ಅಂದರೆ ಪ್ರಕರಣಗಳ ವಿಲೇವಾರಿಯನ್ನು ದೂರುದಾರರ ಮನೆಯಿಂದಲೇ ನಡೆಸಿ ಸುಮಾರು 1.59 ಲಕ್ಷ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ ಎಂದರು. ದೇಶದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ ಸಾರ್ವಜನಿಕರಿಗೆ ಕಾನೂನು ಹಕ್ಕುಗಳ ಅರಿವು ಅಗತ್ಯವಿದೆ. ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
23ಕೆಡಿಬಿಪಿ3-
ಬೆಂ.ಗ್ರಾ ಜಿಲ್ಲೆಯ ಆಕಾಶ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವಿನ್ಯತಾ ಪರಿಹಾರ ಕ್ರಮಗಳು ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು.