- ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ ಮುಖಂಡರ ಆಕ್ರೋಶ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಮತ್ತೊಂದು ಸಮೀಕ್ಷೆಗೆ ಸರ್ಕಾರ ಶಿಫಾರಸು ಮಾಡಿದ್ದನ್ನು ಖಂಡಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರತು ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿದ ಒಕ್ಕೂಟ ಮತ್ತು ಮಾದಿಗ ಸಮಾಜದ ಮುಖಂಡರು ನಂತರ ಡಿಸಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಒಕ್ಕೂಟದ ಮುಖಂಡ ಆಲೂರು ನಿಂಗರಾಜ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಒಳಮೀಸಲಾತಿಯ ವರ್ಗೀಕರಣ ಕುರಿತಂತೆ ಹೇಳಿಲ್ಲ. ಬದಲಾಗಿ ಆದಿಕರ್ನಾಟಕ (ಎ,ಕೆ,), ಆದಿದ್ರಾವಿಡ (ಎ.ಡಿ.) ಜಾತಿಗಳಲ್ಲಿ ಗೊಂದಲ ಇರುವುದರಿಂದ ಮತ್ತೊಂದು ಸಮೀಕ್ಷೆ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮೀಕ್ಷೆ ವಿವರ ಮತ್ತು ನಿರ್ವಹಣೆಗೆ ಸಮಿತಿ ರಚಿಸುವಂತೆ ಕೇಳಿಕೊಂಡಿದೆ ಎಂದರು.ರಾಜ್ಯ ಸರ್ಕಾರದಿಂದ ನೆಪ:
ಸುಪ್ರೀಂ ಕೋರ್ಟ್ ಆ.1ರಂದು ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆಯೆಂಬ ತೀರ್ಪು ನೀಡಿದೆ. ತೀರ್ಪಿನ ನಂತರ ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ತೆವಳುತ್ತಿದೆ. ಹರಿಯಾಣ ಬಿಜೆಪಿ ಸರ್ಕಾರ ತೀರ್ಪು ಬಂದ ಒಂದೇ ವಾರದಲ್ಲೇ ಒಳ ಮೀಸಲಾತಿ ಜಾರಿಗೊಳಿಸಿತು. ತೆಲಂಗಾಣದ ಕಾಂಗ್ರೆಸ್ ಸರ್ಕಾರ, ಆಂಧ್ರದ ತೆಲುಗುದೇಶಂ ಸರ್ಕಾರ ಒಳಮೀಸಲಾತಿಗೆ ಆದೇಶಿಸಿವೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ನೀಡಲು ನೆಪ ಹುಡುಕುತ್ತಾ, ಮೀನ-ಮೇಷ ಎಣಿಸುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.ಮಧ್ಯಂತರ ವರದಿಯಲ್ಲಿ ಮಾದಿಗ ಸಮಾಜದ ಶೇ.6ರ ಪ್ರತ್ಯೇಕ ಮೀಸಲಾತಿ ಜಾರಿ ಮಾಡಿ, ಮತ್ತೆ ಸಮೀಕ್ಷೆ ಮಾಡಿಕೊಳ್ಳಲಿ. ಇದು ನಮ್ಮ ಬೇಡಿಕೆಯಾಗಿತ್ತು. ಆದರೆ, ಆಯೋಗವು ವರ್ಗೀಕರಣದ ವಿಷಯ ಬದಿಗಿಟ್ಟು, ಹಸಿದು ಕಂಗಾಲಾಗಿರುವ ಅವಕಾಶ ವಂಚಿತ, ಅನಾದಿಯಿಂದಲೂ ಶೋಷಣೆಗೊಳಗಾದ ಮಾದಿಗ ಸಮಾಜಕ್ಕೆ ಮತ್ತೊಂದು ಸಮೀಕ್ಷೆಯೆ ಶಿಫಾರಸು ಮಾಡಿರುವುದು ಮಾತ್ರ ಮಾದಿಗ ಸಮಾಜಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ಪ್ರಣಾಳಿಕೆಯಲ್ಲೇ ನೀಡಿತ್ತು. ಚಿತ್ರದುರ್ಗ ಸಮಾವೇಶದಲ್ಲೂ ಇದೇ ಘೋಷಣೆ ಮಾಡಲಾಗಿತ್ತು. ಈಗ 2 ವರ್ಷವಾದರೂ ಒಂದು ದಿಟ್ಟಹೆಜ್ಜೆ ಇಡದ ಕಾಂಗ್ರೆಸ್ ಸರ್ಕಾರ ನಿಂತಲ್ಲೇ ತೆವಳುತ್ತಿದೆ. ಸರ್ಕಾರದ ನಡೆಯ ವಿರುದ್ಧ ಇಡೀ ಮಾದಿಗ ಸಮಾಜದ ರೋಸಿ ಹೋಗಿದೆ. ಸರ್ಕಾರ ತನ್ನ ನಡೆ ಸರಿಪಡಿಸಿಕೊಳ್ಳಬೇಕು. ಮಾದಿಗರ ಪಾಲಿನ ಶೇ.6 ಪ್ರತ್ಯೇಕ ಮೀಸಲಾತಿ ತಕ್ಷಣ ಜಾರಿ ಮಾಡಬೇಕು. ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲಿ ಎಂದು ತಾಕೀತು ಮಾಡಿದರು.ಮುಖಂಡರಾದ ರಾಜು ಶಾಮನೂರು, ಹರೀಶ ಹೊನ್ನೂರು, ಎಚ್.ಷಣ್ಮುಖ, ಅಂಜಿನಪ್ಪ ಎಂ.ಶಾಮನೂರು, ಬಿ.ಆನಂದ, ಡಿ.ಕರಿಯಪ್ಪ ಆವರಗೆರೆ, ಎಚ್.ನಿಂಗರಾಜ, ಡಿ.ಹನುಮಂತಪ್ಪ ಇತರರು ಪ್ರತಿಭಟನೆಯಲ್ಲಿದ್ದರು.
- - -ಕೋಟ್ ಮತ್ತೆ ಸಮೀಕ್ಷೆ ಕೈಗೊಂಡು, ಹಂಚಿಕೆಯ ಆದೇಶ ಮಾರ್ಪಾಡು ಮಾಡಲಿ. ನ್ಯಾಯಮೂರ್ತಿ ಸದಾಶಿವ ಆಯೋಗದ ದತ್ತಾಂಶ ಬಳಸಿ, ಹೊಸ ಆದೇಶ ಹೊರಡಿಸಬೇಕು. ಇದ್ಯಾವುದನ್ನೂ ಮಾಡದೇ, ಕೇವಲ ಸಮೀಕ್ಷೆ ಮಾಡುವ ಯೋಜನೆಯ ಹಿಂದೆ ಬರೀ ಕಾಲಹರಣದ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ. ಒಳಮೀಸಲಾತಿ ಬಗ್ಗೆ ಸರ್ಕಾರ ಇನ್ನಾದರೂ ತನ್ನ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಲಿ
- ಆಲೂರು ನಿಂಗರಾಜ, ಮುಖಂಡ- - - -28ಕೆಡಿವಿಜಿ2, 3.ಜೆಪಿಜಿ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರದ ಮೀನ-ಮೇಷ ಎಣಿಸುತ್ತಿದೆ ಎಂದು ಆರೋಪಿಸಿ ದಾವಣಗೆರೆಯಲ್ಲಿ ಶುಕ್ರವಾರ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಲಾಯಿತು.