ಅನ್ಸಾರಿಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲ: ಜನಾರ್ದನ ರೆಡ್ಡಿ

KannadaprabhaNewsNetwork | Published : Apr 28, 2024 1:17 AM

ಸಾರಾಂಶ

ಇಕ್ಬಾಲ್ ಅನ್ಸಾರಿ ಸ್ವಂತ ಮನೆಯವರಿಗೆ ಏನು ಮೋಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಇಂತಹ ಸಂದರ್ಭದಲ್ಲಿ ಬೇರೆಯವರಿಗೆ ಅವರು ಮಾತನಾಡುವುದು ಯಾವ ಲೆಕ್ಕ ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.

ಗಂಗಾವತಿ: ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.

ತಾಲೂಕಿನ ಆನೆಗೊಂದಿಯಲ್ಲಿ ಜರುಗಿದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಏಕವಚದಲ್ಲಿ ಅನ್ಸಾರಿ ಮಾತನಾಡುತ್ತಾರೆ. ಅಂಥವ, ಇಂಥವ ಅಂತೆಲ್ಲ ಅಂತಾರೆ. ಆ ರೀತಿ ಮಾತಾಡೋದು ನನಗೆ ದೊಡ್ಡದಲ್ಲ. ಆದರೆ ನಾನು ಸಂಸ್ಕೃತಿ ಉಳ್ಳವನಾಗಿದ್ದೇನೆ. ಸಣ್ಣತನದ ಮಾತನಾಡಿದರೆ ನನಗೆ ಶೋಭೆ ಅಲ್ಲ ಎಂದರು.

ಇಕ್ಬಾಲ್ ಅನ್ಸಾರಿ ಸ್ವಂತ ಮನೆಯವರಿಗೆ ಏನು ಮೋಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಇಂತಹ ಸಂದರ್ಭದಲ್ಲಿ ಬೇರೆಯವರಿಗೆ ಅವರು ಮಾತನಾಡುವುದು ಯಾವ ಲೆಕ್ಕ? ಇಕ್ಬಾಲ್ ಅನ್ಸಾರಿ ಹುಚ್ಚುಚ್ಚಾಗಿ ಏನೇನೊ ಮಾತಾಡ್ತಾರೆ. ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಹೋಗುತ್ತಾರೆಂದು ಮೊದಲೆ ಹೇಳಿದ್ದೆ ಅಂತ ಅನ್ಸಾರಿ ಹೇಳಿದ್ದರು. ಆದರೆ ನಾನು ನನ್ನ ತವರು ಪಕ್ಷಕ್ಕೆ ಬಂದಿರುವುದು ಯಾವ ತಪ್ಪು? ಬೇರೆಯವರಂತೆ ಓಡಿ ಹೋಗುವ ಜಾಯಮಾನ ನನ್ನದಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ರಾಜ ಶ್ರೀಕೃಷ್ಣದೇವರಾಯಲು, ಜೋಗದ ಹನುಮಂತಪ್ಪನಾಯಕ, ಮನೋಹರಗೌಡ ಇದ್ದರು.

ಬಿಜೆಪಿಗೆ ಮತ ಹಾಕಿದರೆ ತಂಗಡಗಿ ಕಪಾಳಕ್ಕೆ ಹೊಡೆದಂತೆ

ಎರಡು ಬಾರಿ ಮನಸಿನಲ್ಲಿ ಮೋದಿ ಮೋದಿ ಎಂದು ಸ್ಮರಣೆ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರೆ ತಂಗಡಗಿಯ ಕೆನ್ನೆಗೆ ಎರಡು ಸಲ ಬಾರಿಸಿದಂತೆ ಆಗುತ್ತದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಮನವಿ ಮಾಡಿದರು.ಹನುಮಸಾಗರ ಗ್ರಾಮದ ಲೋಕಸಭಾ ಚುನಾವಣಾ ಬಿಜೆಪಿ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ಮೋದಿ ಮೋದಿ ಅಂದ್ರೆ ಶಿವರಾಜ ತಂಗಡಗಿ ಅವರಿಗೆ ಕಿವಿಯಲ್ಲಿ ಮುಳ್ಳು ಚುಚ್ಚಿದಂತೆ ಆಗುತ್ತದೆ. ಮೋದಿ ಮೋದಿ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದರು. ಎಷ್ಟು ತಲೆ ಕೆಟ್ಟಿರಬೇಕು ಅವರಿಗೆ? ಸಂಸ್ಕಾರ ಇಲ್ಲದ ಕಾಂಗ್ರೆಸ್ ಮಂತ್ರಿ ತಂಗಡಗಿ ಕಪಾಳಕ್ಕೆ ಹೊಡಿಬೇಕು ಅಂದ್ರೆ ನಮಗೆ ಒಂದು ಸೆಕೆಂಡ್ ಕೂಡ ಟೈಮ್ ಬೇಕಾಗಿಲ್ಲ. ಆದರೆ ಅದು ಬಿಜೆಪಿ ಸಂಸ್ಕಾರ, ಸಂಸ್ಕೃತಿ ಅಲ್ಲ ಎಂದರು.ಅಧಿಕಾರಕ್ಕೆ ಬರಲು ಆಗ್ತಿಲ್ಲ ಅಂತ ನನ್ನನ್ನು ನಾಲ್ಕು ವರ್ಷ ಜೈಲಲ್ಲಿಟ್ಟು ಅಧಿಕಾರಕ್ಕೆ ಬಂದಿದ್ದೀರಿ, ನಾಚಿಕೆಯಾಗಬೇಕು ನಿಮಗೆ. ಈಗ ಅಧಿಕಾರಕ್ಕೆ ಹೇಗೆ ಬರ್ತೀರೋ ನಾನು ನೋಡ್ತೀನಿ. ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ, ಆಂಧ್ರದಲ್ಲಿ ಜಗನ್ಮೋಹನ್ ರೆಡ್ಡಿ, ತಮಿಳುನಾಡಿನಲ್ಲಿ ಕನಿಮೋಳಿ, ಗುಜರಾತಲ್ಲಿ ಅಮಿತ್ ಶಹಾ ಅವರನ್ನು ಜೈಲಿಗೆ ಹಾಕಿದ್ದೀರಿ. ಅಧಿಕಾರಕ್ಕಾಗಿ 25, 30 ಕುಟುಂಬಗಳನ್ನು ಜೈಲಿಗೆ ಹಾಕಿದ ಕಾಂಗ್ರೆಸ್‌ ಬಣ್ಣ ಬಯಲಾಗುತ್ತಿದೆ ಎಂದರು ಜನಾರ್ದನ ರೆಡ್ಡಿ.

Share this article