ತಮ್ಮ ನೇಮಕ ಮಾಡದೆ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ನೇಮಕ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಕ್ಷೇಪ ಸಲ್ಲಿಸಲು ನಿರ್ಧರಿಸಿದ್ದಾರೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್ 2 ನೇಮಕ ಅಧಿಕಾರ ಸಂಸದ ರಾಜಶೇಖರ ಹಿಟ್ನಾಳಗೆ ನೀಡುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೋಪಿಸಿಕೊಂಡಿದ್ದರೆ, ಅವರ ಬೆಂಬಲಿಗರು ಅಸಮಾಧಾನಗೊಂಡು ಜೆಡಿಎಸ್ ಜಪ ಮಾಡಲಾರಂಭಿಸಿದ್ದಾರೆ.
ಕಾಂಗ್ರೆಸ್ ಚಟುವಟಿಕೆಯಿಂದ ದೂರವೇ ಉಳಿದಿದ್ದ ಇಕ್ಬಾಲ್ ಅನ್ಸಾರಿ ಅವರನ್ನು ಈಗ ಪಕ್ಷವೇ ದೂರ ಸರಿಸಿದೆ. ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಆಡಿಯೋ ರಿಲೀಸ್ ಮಾಡಿ ಕೆಂಡಕಾರಿದ್ದರು. ಇದು ಕಾಂಗ್ರೆಸ್ ಪಕ್ಷದಲ್ಲಿ ನಾನಾ ಚರ್ಚೆಗೂ ಕಾರಣವಾಗಿತ್ತು.
ಈಗ ಕೆಪಿಸಿಸಿ ಬೂತ್ ಮಟ್ಟದ ಎಜೆಂಟರ ನೇಮಕ ಅಧಿಕಾರ ಆಯಾ ಕ್ಷೇತ್ರದಲ್ಲಿ ಸೋತವರು ಅಥವಾ ಗೆದ್ದವರಿಗೆ ನೀಡಿದೆ. ಆದರೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಂಸದ ರಾಜಶೇಖರ ಹಿಟ್ನಾಳಗೆ ನೀಡಿದೆ. ಇದು ಈಗ ಇಕ್ಬಾಲ್ ಅನ್ಸಾರಿ ಮತ್ತು ಬೆಂಬಲಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಇಕ್ಬಾಲ್ ಅನ್ಸಾರಿ ಸೇರಿದಂತೆ ಅವರ ಬೆಂಬಲಿಗರು ಶುಭಕೋರಿದ್ದಾರೆ. ಕೇವಲ ಶುಭ ಕೋರಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಇಕ್ಬಾಲ್ ಅನ್ಸಾರಿ ಬೆಂಬಲಿಗರು ದೇವೇಗೌಡ ಮತ್ತು ಇಕ್ಬಾಲ್ ಅನ್ಸಾರಿ ಜತೆಗೆ ಇರುವ ಹಳೆಯ ಫೋಟೋ ಅಪ್ಲೋಡ್ ಮಾಡಿ, ಅಕ್ಕಿ ಹಳೆಯದಾದರೆ ಅನ್ನ ಮಾಡಲು ಚೆನ್ನ ಎಂದೆಲ್ಲ ಟ್ಯಾಗ್ ಲೈನ್ ಬರೆಯುವ ಮೂಲಕ ಇಕ್ಬಾಲ್ ಅನ್ಸಾರಿ ಜೆಡಿಎಸ್ ಹೋಗುವುದು ಸೂಕ್ತ ಎನ್ನುವ ಅರ್ಥದ ಸಂದೇಶ ನೀಡಿದ್ದಾರೆ.
ಇದ್ಯಾವುದಕ್ಕೂ ಇದುವರೆಗೂ ಅನ್ಸಾರಿ ನೇರವಾಗಿ ಪ್ರತಿಕ್ರಿಯೇ ನೀಡಿಲ್ಲ. ಆದರೆ, ತಮ್ಮ ನೇಮಕ ಮಾಡದೆ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ನೇಮಕ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಕ್ಷೇಪ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಅವರ ಆಪ್ತ ವಲಯ.
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮತ್ತು ನಾಯಕತ್ವ ನಿರ್ಲಕ್ಷ್ಯದ ಕುರಿತು ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಇಕ್ಬಾಲ್ ಅನ್ಸಾರಿ ಖುದ್ದು ಸಿಎಂ ಅವರನ್ನೇ ಭೇಟಿ ಮಾಡಿ ದೂರು ಸಲ್ಲಿಸುವ ಸಾಧ್ಯತೆ ಇದೆ.
ಕೈಬಿಟ್ಟಿತಾ ಕೆಪಿಪಿಸಿ: ಬಿಎಲ್ 2 ನೇಮಕ ಅಧಿಕಾರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ತಪ್ಪಿಸುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೇ ಇಕ್ಬಾಲ್ ಅನ್ಸಾರಿ ಅವರನ್ನು ದೂರ ಸರಿಸಿದೆ. ಇದಕ್ಕೆ ಸ್ಥಳೀಯ ನಾಯಕರ ಬೆಂಬಲವೂ ಇರುವಂತೆ ಕಾಣುತ್ತದೆ.
ಸ್ಥಳೀಯ ನಾಯಕರು ಕೆಪಿಸಿಸಿಗೆ ಈ ಹಿಂದೆಯೂ, ಪದೇ ಪದೆ ಆಡಿಯೋ ರಿಲೀಸ್ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಾರೆ ಎಂದು ದೂರು ಸಲ್ಲಿಸಿದ್ದರು. ಹೀಗಾಗಿಯೇ ಕೆಪಿಸಿಸಿಯೇ ದೂರ ಹೋಗುವಂತೆ ಮಾಡಿದೆ ಎನ್ನಲಾಗಿದೆ.
ನಾನಾ ಚರ್ಚೆಗೆ ಇಂಬು: ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆ ಕಳೆದ ಬಾರಿಯೇ ಹಿಟ್ನಾಳ ಕುಟುಂಬ ಕಣ್ಣಿಟ್ಟಿತ್ತು. ಅದು ಕೊನೆಗಳಿಗೆಯಲ್ಲಿ ಕೈಗೂಡಲಿಲ್ಲ. ಹೊಸಪೇಟೆ ಕ್ಷೇತ್ರದಲ್ಲಿಯೂ ಸಂಸದ ರಾಜಶೇಖರ ಹಿಟ್ನಾಳ ಪಕ್ಷ ಸಂಘಟನೆ ಮಾಡಿದ್ದು, ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲಿಯೂ ವರ್ಕೌಟ್ ಆಗಲಿಲ್ಲ. ಆದರೆ ಈಗ ಗಂಗಾವತಿ ಕ್ಷೇತ್ರದಲ್ಲಿ ಬೂತ್ ಮಟ್ಟದ ಏಜೆಂಟರ ನೇಮಕ ಮಾಡುವ ಅಧಿಕಾರ ಪಡೆಯುವ ಮೂಲಕ ಬುಡಮಟ್ಟದಲ್ಲಿಯೇ ತಮ್ಮ ಬೆಂಬಲಿಗರ ಪಡೆ ಸೃಷ್ಠಿಸಿಕೊಳ್ಳಲು ಸಂಸದ ರಾಜಶೇಖರ ಹಿಟ್ನಾಳಗೆ ಕೆಪಿಸಿಸಿಯೇ ಅಧಿಕಾರ ನೀಡಿದ್ದು, ನಾನಾ ಚರ್ಚೆಗೆ ಇಂಬು ನೀಡುವಂತೆ ಆಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.