ಕನ್ನಡ ಬೆಳೆಸಲು ಕಸಾಪ ಜೊತೆ ಕೈಜೋಡಿಸಿ: ಅಂಶಿ ಪ್ರಸನ್ನಕುಮಾರ್‌

KannadaprabhaNewsNetwork | Published : May 26, 2024 1:30 AM

ಸಾರಾಂಶ

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಭಾಷೆಯಾಗಿರುವುದರಿಂದಲೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅತಿ ಹೆಚ್ಚು ಜ್ಞಾನಪೀಠ ಪುರಸ್ಕಾರಗಳು ಕನ್ನಡಕ್ಕೆ ಬಂದಿವೆ. ಇಷ್ಟೆಲ್ಲಾ ಇದ್ದರೂ ಸಹ ನಾವು ನವೆಂಬರ್‌ನಲ್ಲಿ ಮಾತ್ರ ಕನ್ನಡದ ಜಾಗೃತರಾಗಿ ಬೇರೆ ಸಂದರ್ಭದಲ್ಲಿ ಮರೆಯುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಬೆಳೆಸುವುದು ಕೇವಲ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವಲ್ಲ್ಯ. ಎಲ್ಲಾ ಸಂಘ, ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟಬಲ್‌ ಟ್ರಸ್ಟ್‌ ಮತ್ತು ರಾಸಾ ಪಬ್ಲಿಕೇಷನ್ಸ್‌ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ನುಡಿ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಕನ್ನಡ ಪರ ಸಂಘಟನೆಗಳು ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಭಾಷೆಯಾಗಿರುವುದರಿಂದಲೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅತಿ ಹೆಚ್ಚು ಜ್ಞಾನಪೀಠ ಪುರಸ್ಕಾರಗಳು ಕನ್ನಡಕ್ಕೆ ಬಂದಿವೆ. ಇಷ್ಟೆಲ್ಲಾ ಇದ್ದರೂ ಸಹ ನಾವು ನವೆಂಬರ್‌ನಲ್ಲಿ ಮಾತ್ರ ಕನ್ನಡದ ಜಾಗೃತರಾಗಿ ಬೇರೆ ಸಂದರ್ಭದಲ್ಲಿ ಮರೆಯುತ್ತಿದ್ದೇವೆ. ಇದರ ಬದಲು ವರ್ಷವಿಡಿ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಪರಂಪರೆ ಬೆಳೆಸುವ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಅವರು ಸಲಹೆ ಮಾಡಿದರು.

ಕನ್ನಡಿಗರು ಕನ್ನಡ ಪುಸ್ತಕೋದ್ಯಮ ಮತ್ತು ಪತ್ರಿಕೋದ್ಯಮ ಬೆಳೆಸಬೇಕು ಎಂದು ಅವರು ಹೇಳಿದರು.

ಪ್ರಸ್ತುತ ಕನ್ನಡದಲ್ಲಿ ಓದಿದರೆ ಕೆಲಸ ಸಿಗುವುದಿಲ್ಲ ಎಂಬ ಭಾವನೆ ಇದೆ. ಇದು ಹೋಗಬೇಕು. ಕನ್ನಡ ಅನ್ನದ ಭಾಷೆಯಾಗಬೇಕು. ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ತೆಯ ಪ್ರಾಧ್ಯಾಪಕಿ, ಕವಯತ್ರಿ ಡಾ.ಎನ್‌.ಕೆ. ಲೋಲಾಕ್ಷಿ ಅವರು ಕವಿಗೋಷ್ಠಿ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು.

ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟಬಲ್‌ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರಾಸಾ ಆರ್. ಈಶ್ವರ್, ಟ್ರಸ್ಟಿ ಹೇಮಾ, ಜಿಲ್ಲಾ ಕಸಾಪ ಉಪಾಧ್ಯಕ್ಷ ಟಿ. ತ್ಯಾಗರಾಜು, ಹರೇ ಶ್ರೀನಿವಾಸ ಸಮಿತಿಯ ಅಧ್ಯಕ್ಷ ಗುಂಡು ವೆಂಕಟೇಶಕುಮಾರ್‌, ಮಾನವಹಕ್ಕು ಹೋರಾಟಗಾರ ಕಸ್ತೂರಿ ಚಂದ್ರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗೋಷ್ಠಿಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದವರು ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Share this article