ಬಿಜೆಪಿ ಆರೋಪಕ್ಕೆ ಅಭಿವೃದ್ಧಿ ಕಾರ್ಯದ ಮೂಲಕ ಉತ್ತರ

KannadaprabhaNewsNetwork |  
Published : Nov 25, 2025, 01:15 AM IST
   ಸಿಕೆಬಿ-1 ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ 2000 ಕೋಟಿ ಕಾಮಗಾರಿಗಳ ಉಧ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.     ಸಿಕೆಬಿ-2  ಜಿಲ್ಲಾ ಕುರುಬರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬನ್ನೂರು ಕುರಿಯನ್ನು ಉಡುಗೊರೆಯಾಗಿ ನೀಡಲಾಯಿತು | Kannada Prabha

ಸಾರಾಂಶ

ಬಿಜೆಪಿಗೆ ರಾಜ್ಯದ ಜನ ಅಧಿಕಾರ, ಅವಕಾಶ ಕೊಟ್ಟಾಗ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಒಂದೇ ಒಂದು ಮನೆಯನ್ನೂ ಇಡೀ ಸರ್ಕಾರದ ಅವಧಿಯಲ್ಲಿ ಬಿಜೆಪಿ ವಿತರಣೆ ಮಾಡಲಿಲ್ಲ. ಈಗ ನಾವು ರಾಜ್ಯದ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು, ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದೇವೆ. ಹೀಗಾಗಿ 2028 ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ಶಿಡ್ಲಘಟ್ಟ

ಖಜಾನೆ ಖಾಲಿ ಎನ್ನುವ ಬಿಜೆಪಿ ಸುಳ್ಳಿನ‌ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಎಚ್.ಎನ್.ವ್ಯಾಲಿಯ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ

ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣದ ಬಳಿಕ ಇದು ಇಡೀ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಅನುಕೂಲ‌ ಆಗಲಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಪರ್ವದ ವೇಗವನ್ನು ತೋರಿಸುತ್ತಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ ಎಂದರು.

ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ ಬೇಕು ಎನ್ನುವುದೂ ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕ್ಷೇತ್ರದ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮನವಿಯಂತೆ ಎಲ್ಲ ಕಾಮಗಾರಿಗಳಿಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಕೆಲಸ ಮಾಡಲಿಲ್ಲ

ಬಿಜೆಪಿಗೆ ರಾಜ್ಯದ ಜನ ಅಧಿಕಾರ, ಅವಕಾಶ ಕೊಟ್ಟಾಗ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಒಂದೇ ಒಂದು ಮನೆಯನ್ನೂ ಇಡೀ ಸರ್ಕಾರದ ಅವಧಿಯಲ್ಲಿ ಬಿಜೆಪಿ ವಿತರಣೆ ಮಾಡಲಿಲ್ಲ. ಈಗ ನಾವು ರಾಜ್ಯದ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು, ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದೇವೆ. ಹೀಗಾಗಿ 2028 ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಬೇಕು, ಜಾತಿ ವ್ಯವಸ್ಥೆ ಮತ್ತು ವರ್ಗ ವ್ಯವಸ್ಥೆ ಹೋಗಬೇಕು ಆಗ ಮಾತ್ರ ದೇಶಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಹೀಗಾಗಿ ನಮ್ಮ ಸರ್ಕಾರ ಎಲ್ಲ ಜಾತಿ, ಧರ್ಮದ ಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದೆ. ನಮ್ಮದು ಸರ್ವ ಧರ್ಮ ಮತ್ತು ಸರ್ವ ಜಾತಿಯವರನ್ನು ಒಳಗೊಂಡ ಸರ್ಕಾರ ಎಂದರು. ಬನ್ನೂರು ಕುರಿ ಉಡುಗೊರೆ

ಇದೇ ವೇಳೆ ಜಿಲ್ಲಾ ಕುರುಬರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬನ್ನೂರು ಕುರಿಯನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಚಿವರಾದ ಕೆ.ಹೆಚ್.ಮುನಿಯಪ್ಪ.ದಿನೇಶ್ ಗುಂಡೂರಾವ್, ಎಚ್.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ, ಬೈರತಿ ಸುರೇಶ್, ಜಮೀರ್ ಅಹಮದ್, ವೆಂಕಟೇಶ್, ರಹೀಂ ಖಾನ್, ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಎನ್.ಎಸ್. ಬೋಸರಾಜು, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಪ್ರದೀಪ್ ಈಶ್ವರ್ , ಕೆ.ಹೆಚ್. ಪುಟ್ಟಸ್ವಾಮಿಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ತು ಸದಸ್ಯರಾದ ಚಿದಾನಂದ ಎಂ. ಗೌಡ, ಎಂ.ಎಲ್.ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ, ಡಾ. ಹೆಚ್.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್ ಶಿವಶಂಕರರೆಡ್ಡಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ