ಕನ್ನಡಪ್ರಭ ವಾರ್ತೆ ರಾಮನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ದ್ರೋಹ ಬಗೆಯುತ್ತಿದೆ ಎಂದು ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಕಿಡಿಕಾರಿದರು.ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿ , ಆದಿವಾಸಿ ಜನರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಉನ್ನತೀಕರಣಕ್ಕೆ ಬಳಕೆ ಮಾಡಬೇಕಾದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ವೃದ್ಧಿಯ ಯೋಜನೆಗಳಿಗೆ ಬಳಕೆ ಮಾಡುತ್ತಿದೆ ಎಂದು ಟೀಕಿಸಿದರು.
ಶಕ್ತಿ ಯೋಜನೆಗೆ 5,30,000 ಲಕ್ಷ ಬಳಕೆ:ರಾಜ್ಯ ಸರ್ಕಾರ 2025-26ನೇ ಸಾಲಿನ ಆಯವ್ಯಯದಲ್ಲಿ ಶಕ್ತಿ ಯೋಜನೆ ಒಂದಕ್ಕೆ ಪರಿಶಿಷ್ಟ ಜಾತಿ ಉಪಯೋಜನೆ (ಎಸ್ ಸಿಎಸ್ ಪಿ) ಅಡಿ 1,06,000 ಲಕ್ಷ ಹಾಗೂ ಗಿರಿಜನ ಉಪಯೋಜನೆ (ಟಿಎಸ್ಪಿ) ಅಡಿ 47700 ಲಕ್ಷ ರು.ಸೇರಿದಂತೆ ಒಟ್ಟಾರೆ 5,30,000 ಲಕ್ಷ ರು.ಗಳನ್ನು ಹಂಚಿಕೆ ಮಾಡಿದೆ ಎಂದು ದೂರಿದರು.ಈ ಸರ್ಕಾರ ದಮನಿತ ಜಾತಿಗಳು, ದುರ್ಬಲ ವರ್ಗಗಳ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದು, ಪಕ್ಷಕ್ಕೆ ವೈಯಕ್ತಿಕ ಲಾಭ ಮಾಡಿಕೊಳ್ಳಲು ಪರಿಶಿಷ್ಟರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲದೆ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್ ಗಡ, ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳ ಖರ್ಚಿಗೆ ಬಳಸುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟರ ಏಳ್ಗೆಯ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಕೇಳ ಬೇಕಾದ ವಿರೋಧ ಪಕ್ಷಗಳು ಜಾತಿಕಾರಣ, ರಾಜಕಾರಣದ ಲಾಭ ಬುಡುಕರಾಗಿ ಸದ್ದಡಗಿದಂತಾಗಿದೆ. ಇದಲ್ಲದೆ ದಲಿತ ಸಂಘಟನೆಗಳು, ಬಹುಜನ ಚಳವಳಿಗಳು ಹಾಗೂ ಶೋಷಿತ ಸಮಾಜದ ಸಂಘಟನೆಗಳು ಹೋರಾಟದ ಹಾದಿ ಹಿಡಿಯದೆ ಮೌನ ವಹಿಸಿವೆ.ಅನೇಕ ಸಂಘನೆಗಳಲ್ಲಿ ಒಂದೇ ತಾಯಿಯ ಮಕ್ಕಳಾಗಿದ್ದ ಮಾದಿಗ, ಭೋವಿ, ಲಂಬಾಣಿ, ವಾಲ್ಮೀಕಿ, ಆದಿವಾಸಿಗಳು, ಅಲೆಮಾರಿಗಳು, ಅರೆ ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಒಳ ಮೀಸಲಿನ ಹೆಸರಿನಲ್ಲಿ ಹೊಡೆದು ಹೋಳಾಗಿಸಿ ಸಂಘಟನೆಯ ನಾಯಕರನ್ನು ಮೂಕರು ಮತ್ತು ಕಿವುಡರನ್ನಾಗಿ ಮಾಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಸಹ್ಯ ತರುವಂತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷಕ್ಕೆ ವೈಯಕ್ತಿಕ ಲಾಭ ತರುವ ಯೋಜನೆಗಳಿಗೆ ಎಸ್ಸಿ ಎಸ್ಟಿಗಳ ವಿಶೇಷ ಘಟಕ ಯೋಜನೆ ಹಣವನ್ನು ಬಳಸುವುದಾದರೆ ಬಿಟ್ಟಿ ಭಾಗ್ಯಗಳನ್ನು ನಿಲ್ಲಿಸಬೇಕು. ಜನಪರ ಸರ್ಕಾರದ ಧ್ಯೇಯವೆಂದರೆ ದಮನಿತರು, ದುರ್ಬಲರು ಹಾಗೂ ಹಿಂದುಳಿದವರನ್ನು ಸಬಲೀಕರಣಗೊಳಿಸಿ ಸಾಮಾಜಿಕ ನ್ಯಾಯ ನೀಡಿ ಸಮಾನೆತೆ ಸೃಷ್ಟಿಸುವುದೇ ಹೊರತು ಬೆಂದ ಮನೆಯಲ್ಲಿ ಗಳ ಹಿರಿಯುವುದಲ್ಲ ಎಂದು ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಾತನೂರು ಶಿವಮಾದು, ತಾಮಸಂದ್ರ ಮುತ್ತುರಾಜು, ಹರಿಹರ ಬಸವರಾಜು, ಶೀಗೇಕೋಟೆ ವೀರಭದ್ರಯ್ಯ, ಶ್ರೀನಿವಾಸ್ ಇದ್ದರು.
---------24ಕೆಆರ್ ಎಂಎನ್ 1.ಜೆಪಿಜಿ
ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.