ಸಂವಿಧಾನ ವಿರೋಧಿಗಳು ಕೇವಲ 10 ಪರ್ಸೆಂಟ್ ಮಾತ್ರ

KannadaprabhaNewsNetwork |  
Published : Mar 01, 2025, 01:02 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ರಕ್ಷಾ ಅಭಿಯಾನಕ್ಕೆ ಸಂವಿಧಾನ ಪೀಠಿಕೆ ಓದುವುದರ ಮೂಲಕ ಚಾಲನೆ ನೀಡಲಾಯಿತು.

ಸಂವಿಧಾನ ರಕ್ಷಾ ಅಭಿಯಾನದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂವಿಧಾನದ ಪರವಾಗಿ ಶೇ.90ರಷ್ಟು ಜನರಿದ್ದರೆ. ವಿರೋಧಿಸುವವರು ಕೇವಲ 10 ಪರ್ಸೆಂಟ್ ಮಾತ್ರ. ಸಂವಿಧಾನ ರಕ್ಷಣೆಯಿಂದ ಮಾತ್ರ ಪ್ರತಿಯೊಬ್ಬರು ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲೆಯ ವಿವಿಧ ಘಟಕಗಳ ವತಿಯಿಂದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ರಕ್ಷಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಅಭಿಯಾನ ರಕ್ಷಾ ಕುರಿತು ದೇಶದಲ್ಲಿ ಚರ್ಚೆಯಾಗುತ್ತಿರುವುದರ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಿದೆ. ಮಾನವ ಬಂಧುತ್ವ ವೇದಿಕೆಯಿಂದ ಪ್ರತಿ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ವಿಚಾರಗಳನ್ನು ತಿಳಿಸುವ ಮೂಲಕ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಸಂವಿಧಾನದ ಮಹತ್ವವನ್ನು ಕಾಂಗ್ರೆಸ್ ವೇದಿಕೆಯಲ್ಲಿ, ಎನ್‌ಜಿಒಗಳು ಹಾಗೂ ಇನ್ನಿತರೆ ವೇದಿಕೆಗಳಲ್ಲಿ ಜನತೆಗೆ ತಿಳಿಸಬೇಕು. ಎಲ್ಲಿಯವರೆಗೂ ಸಂವಿಧಾನ ಭದ್ರವಾಗಿರುತ್ತದೋ ಅಲ್ಲಿಯತನಕ ಎಲ್ಲರೂ ಸುರಕ್ಷಿತವಾಗಿರುತ್ತಾರೆ. ಸಂವಿಧಾನ ನೀಡಿರುವ ಸಮಾನತೆಯಿಂದ ನಾವುಗಳು ಮಂತ್ರಿಗಳಾಗಿದ್ದೇವೆ. ದೇಶದ ಪ್ರಜೆಗಳ ರಕ್ಷಣೆ ಮಾಡುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತಾಗಿರುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 30 ವರ್ಷಗಳಿಂದಲೂ ಅಂಬೇಡ್ಕರ್ ವಿಚಾರವನ್ನು ಹೇಳುತ್ತಾ ಬರುತ್ತಿದ್ದೇವೆ. ಸಂವಿಧಾನ ರಕ್ಷಾ ಅಭಿಯಾನ ಪ್ರತಿ ತಾಲೂಕು, ಗ್ರಾಮ ಮಟ್ಟಕ್ಕೆ ಹೋಗಬೇಕು. ದಲಿತ ಹೋರಾಟಗಾರ ಎಂ.ಜಯಣ್ಣನವರ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ ಅಲ್ಲಿ ಅಂಬೇಡ್ಕರ್, ಬುದ್ಧ, ಬಸವಣ್ಣನ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಡುತ್ತೇವೆ. ಇಂದಿನ ಮಕ್ಕಳಿಗೆ ಅಂಬೇಡ್ಕರ್ ವಿಚಾರಗಳನ್ನು ಮನನ ಮಾಡುವ ಅಗತ್ಯತೆಯಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮುಂದುವರೆದ ದೇಶಗಳು ನಮ್ಮ ಸಂವಿಧಾನವನ್ನು ಗೌರವಿಸುತ್ತಿವೆ. ಕೋಮುವಾದಿಗಳು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಾಮಾಜಿಕ ನ್ಯಾಯವೇ ಸಂವಿಧಾನದ ಆಶಯವಾಗಿರುವುದರಿಂದ ಪ್ರತಿ ಹಳ್ಳಿ ಹಳ್ಳಿಗೆ ಸಂವಿಧಾನ ರಕ್ಷಾ ಅಭಿಯಾನ ಮುಟ್ಟಬೇಕು ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಂವಿಧಾನ ರಕ್ಷಾ ಅಭಿಯಾನ ಕುರಿತು ದೇಶದೆಲ್ಲೆಡೆ ದೊಡ್ಡ ಚರ್ಚೆಯಾಗುತ್ತಿದೆ. ಅಂಬೇಡ್ಕರ್ ದೇಶ ವಿದೇಶಗಳಲ್ಲಿ ಓದಿ ಸಂವಿಧಾನವನ್ನು ಕೊಟ್ಟಿದ್ದಾರೆ. ಚಿಕ್ಕಂದಿನಲ್ಲಿಯೇ ಸಾಕಷ್ಟು ಹಿಂಸೆ, ನೋವು, ಅವಮಾನ ಅನುಭವಿಸಿದ್ದರಿಂದ ಸಂವಿಧಾನ ನೀಡಲು ಸಾಧ್ಯವಾಯಿತು. ಬಿಜೆಪಿಗರು ಸಂವಿಧಾನ ಬದಲಾವಣೆಗೆ ಮುಂದಾದರೆ ಕ್ರಾಂತಿ ಆಗುತ್ತದೆ ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಂವಿಧಾನ ಉಳಿದರೆ ಪ್ರತಿಯೊಬ್ಬರು ಗೌರವದಿಂದ ಬದುಕಲು ಸಾಧ್ಯ. ಸ್ವಲ್ಪ ಏಮಾರಿದರೂ ಮುಂದಿನ ಪೀಳಿಗೆಗೆ ದ್ರೋಹ ಬಗೆದಂತಾಗುತ್ತದೆ. ಭರವಸೆಯ ನಾಯಕ ಸತೀಶ್‍ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ನಾಡಿನಾದ್ಯಂತ ಸಂವಿಧಾನ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆಂದು ಪ್ರಶಂಶಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅಧಿಕಾರದ ಆಸೆಗಾಗಿ ಕೋಮುವಾದಿ ಬಿಜೆಪಿ ಸಂವಿಧಾನ ಬದಲಾಯಿಸುವುದಾಗಿ ಹೇಳಿ ಜನತೆಯ ದಿಕ್ಕು ತಪ್ಪಿಸುತ್ತಿರುವುದರ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಮೂಢನಂಬಿಕೆ ಹೋಗಲಾಡಿಸಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಮೂಲಕ ಸಂವಿಧಾನ ಉಳಿಸಬೇಕಾಗಿದೆ ಎಂದು ಹೇಳಿದರು.

ನ್ಯಾಯವಾದಿ ಅನಂತನಾಯಕ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರಾಮಚಂದ್ರಪ್ಪ, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ, ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ ಬಾಬು, ಸೋಮಶೇಖರ್, ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಮುರುಳಿಧರ ಹಾಲಪ್ಪ, ಬಿ.ಟಿ.ಜಗದೀಶ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಕುಶಲ ಕರ್ಮಿ ವಿಭಾಗದ ಅಧ್ಯಕ್ಷ ಪ್ರಸನ್ನಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಸೇರಿ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?