ಹಳಿಯಾಳ: ಮತಗಳ್ಳತನ ನಡೆಸುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಗಳ ಮುಖವಾಡ ಕಳಚಿ ಬಿದ್ದಿದೆ. ಇಂದು ಕಾಂಗ್ರೆಸ್ ಆರಂಭಿಸಿದ ಸತ್ಯದ ಹೋರಾಟಕ್ಕೆ ದೇಶವ್ಯಾಪಿ ಬೆಂಬಲ ದೊರೆಯುತ್ತಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಕೆಪಿಸಿಸಿ ನೀಡಿದ ಕರೆಯನ್ನು ಬೆಂಬಲಿಸಿ ಶುಕ್ರವಾರ ಪಟ್ಟಣದಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್‌ನವರು ಆಯೋಜಿಸಿದ ಪ್ರಜಾಪ್ರಭುತ್ವ ಉಳಿಸಿ-ಸಂವಿಧಾನ ರಕ್ಷಿಸಿ ಜನಜಾಗೃತಾ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.ದೇಶದಲ್ಲಿ ಆಡಳಿತ ನಡೆಸುವ ಎನ್‌ಡಿಎ ಸರ್ಕಾರವು ಸಂವಿಧಾನ ಮೇಲೆ ದಾಳಿ ನಡೆಸುವ ಇರಾದೆ ಇದೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ವಿಶ್ವಾಸವಿಲ್ಲವಾಗಿದೆ. ಈ ಸಂವಿಧಾನ ವಿರೋಧಿಗಳು ಹಾಗೂ ಮತಗಳ್ಳತನದ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಇಡೀ ದೇಶದ ಆಡಳಿತ ವ್ಯವಸ್ಥೆಯು ಸಂವಿಧಾನದ ಆಶಯದಂತೆ ನಡೆಯುತ್ತಿದೆ. ಹೀಗಿರುವಾಗ ಸಂವಿಧಾನಕ್ಕೆ ಗಂಡಾಂತರ ಬಂದಾಗ ನಾವೆಲ್ಲರೂ ಸಂರಕ್ಷಣೆಗೆ ಮುಂದಾಗುವ ಅವಶ್ಯಕತೆಯಿದೆ. ದೇಶದ ಹಿತದೃಷ್ಟಿಯಿಂದ ಸಂವಿಧಾನಕ್ಕೆ ಆಗುತ್ತಿರುವ ಮೋಸ, ವಂಚನೆಗಳನ್ನು ತಡೆಯಬೇಕು ಎಂದರು.ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಮತಗಳ್ಳತನವು ದೇಶದ ಗೌರವಕ್ಕೆ ಹಾಗೂ ಮತದಾರರ ಅಧಿಕಾರಕ್ಕೆ ದಕ್ಕೆ ತರುವಂತಾಗಿದೆ. ಇದರ ವಿರುದ್ಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕರ್ನಾಟಕದಿಂದಲೇ ಹೋರಾಟವನ್ನು ಆರಂಭಿಸಿ ಅನ್ಯಾಯದ ಮುಖವಾಡ ಕಳಚಿದ್ದಾರೆ ಎಂದರು.
ಕಾರ್ಯಕರ್ತರ ಶ್ರಮದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಿದೆ. ನಾವು ಕಾಂಗ್ರೆಸ್ ಪಕ್ಷದವರು ಜನರ ಬದುಕು, ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ, ಜನರ ಬದುಕಿಗೆ ಹೊಸ ರೂಪು ನೀಡಲು ರಾಜಕಾರಣ ಮಾಡುತ್ತಿದೆ. ಆದರೆ ವಿರೋದ ಪಕ್ಷಗಳು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿವೆ. ಈ ಸತ್ಯವನ್ನು ಪ್ರತಿಯೊಬ್ಬ ಮತದಾರನಿಗೆ ಮನವರಿಕೆ ಮಾಡಲು ಎಲ್ಲರು ಶ್ರಮಿಸಬೇಕಾಗಿದೆ ಎಂದರು.ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭಗೊಂಡ ಜನಜಾಗೃತಾ ಮೆರವಣಿಗೆಯು ಸ್ವಾತಂತ್ರ್ಯ ಯೋಧರ ಸ್ಮರಣಾರ್ಥದ ಧ್ವಜ ಸ್ತಂಭದವರೆಗೆ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ, ಮುಖಂಡರಾದ ಸತ್ಯಜಿತ ಗಿರಿ, ಅಜರ ಬಸರಿಕಟ್ಟಿ, ಅಲಿಂ ಬಸರಿಕಟ್ಟಿ, ಉಮೇಶ ಬೊಳಶೆಟ್ಟಿ, ಹನೋರಿಯಾ ಬೃಗಾಂಜಾ, ಮಾರುತಿ ಕಲಬಾವಿ, ಖಲೀಲ ದುಸಗಿ, ಮುಖಂಡರು ಇದ್ದರು.