- ಜೆಎನ್‌ಯು ಒಕ್ಕೂಟದ ಉಪಾಧ್ಯಕ್ಷ ಆರೋಪ
ಕೇಂದ್ರ ಸರ್ಕಾರ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ. ಶಿಕ್ಷಣ ಕ್ಷೇತ್ರದತ್ತ ಕೇಂದ್ರ ಸರ್ಕಾರ ಗಮನ ಹರಿಸದಿರುವುದು ದುರದೃಷ್ಟಕರ ಎಂದು ಜೆಎನ್‌ಯು ಒಕ್ಕೂಟದ ಉಪಾಧ್ಯಕ್ಷ ಅವಿಜಿತ್ ಘೋಷ್ ಆರೋಪಿಸಿದರು.
ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಚಳವಳಿ ಮತ್ತು ಧರ್ಮ ರಾಜಕಾರಣ ಗೋಷ್ಠಿಯಲ್ಲಿ ವಿದ್ಯಾರ್ಥಿ ಚಳವಳಿ ಕುರಿತು ಅವರು ಮಾತನಾಡಿದರು.ಶಿಕ್ಷಣದ ಬುನಾದಿ ಅನಿಸಿರುವ ವೈಜ್ಞಾನಿಕ ಮನೋಭಾವ ತೆಗೆದುಹಾಕಿ, ತಮ್ಮ ಪ್ರೊಪಗಾಂಡಾ ಹೇರುವ ಸಂಚನ್ನು ಸರ್ಕಾರ ರೂಪಿಸಿದೆ. ಇದರ ವಿರುದ್ಧ ಜೆಎನ್‌ಯು ಪ್ರಬಲ ಹೋರಾಟ ನಡೆಸುತ್ತಿದೆ. ಅವಧಿ ಮುಗಿದು ನಾಲ್ಕು ವರ್ಷಗಳಾದರೂ ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆಸದೇ ಇರುವುದು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಇದಕ್ಕೆ ಪೂರಕವಾಗಿರುವ ನೀತಿಗಳನ್ನು ಜಾರಿ ಮಾಡುತ್ತಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈತಪ್ಪುವಂತೆ ಮಾಡುವ ಈ ಹುನ್ನಾರವನ್ನು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.
ಚಿಂತಕ ಡಾ. ಅಪ್ಪಗೆರೆ ಸೋಮಶೇಖರ್ ದಲಿತ- ಆದಿವಾಸಿ ಚಳವಳಿ ಕುರಿತು ಮಾತನಾಡಿ, ವರ್ತಮಾನದ ದಲಿತ- ಆದಿವಾಸಿಗಳ ಎದುರು ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ ಎಂಬ ಎರಡು ಆಯ್ಕೆಗಳು ಇವೆ. ಇದರಲ್ಲಿ ಡಾ. ಅಂಬೇಡ್ಕರ್ ನೀಡಿದ ಸಂವಿಧಾನವೇ ಆಯ್ಕೆ ಆಗಬೇಕು ಎಂದು ಹೇಳಿದರು.
ಕಾರ್ಮಿಕ-ರೈತ ಚಳವಳಿ ಕುರಿತು ಪತ್ರಕರ್ತ ಡಾ. ರವಿಕುಮಾರ್ ಬಾಗಿ ಮಾತನಾಡಿದರು.
ಡಾ. ಎಚ್.ಎಸ್. ಅನುಪಮಾ ಕಾರ್ಯಕ್ರಮ ನಿರೂಪಿಸಿದರು.