- ಉದ್ದೇಬೋರನಹಳ್ಳಿಯಲ್ಲಿ ಲಕ್ಯಾ ಹೋಬಳಿ ಮಟ್ಟದ ರೈತ ಸಂಘ ಉದ್ಘಾಟನೆ
ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪುಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿ ಯಾಳಾಗುತ್ತೇವೆ. ವಿದೇಶಿ ವಸ್ತುಗಳ ಆಮದಿನಿಂದ ಸ್ಥಳೀಯ ಹೈನುಗಾರಿಕೆ ವೃತ್ತಿ ನಶಿಸಿ, ಕಾರ್ಪೋರೇಟ್ ಕಂಪನಿಗಳ ಬಲಿಪಶುಗಳಾಗುತ್ತೇವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ಗೆ ಎಚ್ಚರಿಸಿದರು.
ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಲಕ್ಯಾ ಹೋಬಳಿ ಮಟ್ಟದ ರೈತ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಸುಧಾರಣೆ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿರುವ ಪರಿಣಾಮ ನೂರಾರು ಎಕರೆ ಪ್ರದೇಶವನ್ನು ಬಲಾಡ್ಯರು, ವಿದೇಶಿ ಕಂಪನಿಗಳು ರೈತರಿಗೆ ಹಣದಾಸೆ ಹಾಗೂ ಉದ್ಯೋಗದ ಆಸೆ ತೋರಿಸಿ ಖರೀದಿ ಸುತ್ತಿವೆ. ಇದರಿಂದ ಭವಿಷ್ಯದಲ್ಲಿ ರೈತರ ಮಕ್ಕಳಿಗೆ ಕಂಪನಿಗಳು ನಾಮಕಾವಸ್ಥೆಗೆ ಗುಮಾಸ್ತನ ಕೆಲಸ ನೀಡಿ ಕಣ್ಣೋರೆಸುವ ತಂತ್ರ ಮಾಡುತ್ತವೆ ಎಂದು ದೂರಿದರು.ವಿದೇಶಿಗರು ಉತ್ಪಾದಿಸಿದಂತಹ ಡೈರಿ ಪದಾರ್ಥಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಒತ್ತಡ ಹೇರುತ್ತಿವೆ. ಮುಂದೊಂದು ದಿನ ತರಕಾರಿ ಬೆಳೆ ಸೇರಿದಂತೆ ಪ್ರತಿಯೊಂದು ವಸ್ತುಗಳು ಆಮದಾದರೆ ಸ್ಥಳೀಯ ಬೆಳೆಗಳಿಗೆ ಆಪತ್ತು ಕಟ್ಟಿಟ್ಟ ಬುತ್ತಿಯಂತೆ. ಹೀಗಾಗಿ ಒಗ್ಗಟ್ಟಿನಿಂದ ಚಳುವಳಿ ರೂಪಿಸಿ ರೈತ ವಿರೋಧಿ ಕಾಯ್ದೆ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ರೈತ ಸಂಘದ ಮುಖ್ಯಸ್ಥ ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಪರವಾದ ಹೋರಾಟ ಇಡೀ ವಿಶ್ವದ ರೈತರನ್ನು ಪ್ರತಿನಿಧಿ ಸಿತ್ತು. ಬಹುರಾಷ್ಟ್ರೀಯ ಕಂಪನಿಗಳ ತುಳಿತಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವಲ್ಲಿ 3 ದಶಕದಿಂದ ಚಳುವಳಿ ರೂಪಿಸಿ ರೈತರಿಗೆ ನ್ಯಾಯದ ತೀರ್ಮಾನ ಕೈಗೊಳ್ಳುವಲ್ಲಿ ಹೋರಾಡಿದವರು ಎಂದು ತಿಳಿಸಿದರು.
ಭದ್ರ ಉಪ ಕಣಿವೆ ಯೋಜನೆಯಡಿ ನೀರು ಸಿಕ್ಕರೆ ಕೆರೆಕಟ್ಟೆಗಳು ತುಂಬಿ ಜಾನುವಾರು ಹಾಗೂ ಜನಸಾಮಾ ನ್ಯರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಸಾವಿರ ಟಿಎಂಸಿ ನೀರು ಸಂಗ್ರಹವಾದರೆ, 200 ಟಿಎಂಸಿ ನೀರು ಜಿಲ್ಲೆಯಿಂದ ಹರಿ ಯುತ್ತಿದೆ. ಜೊತೆಗೆ ರೈತರು ನೀರಿಲ್ಲದ ಕಾರಣ ಬೆಳೆಗಳು ನಾಶವಾಗುತ್ತಿದ್ದು, ಇನ್ನೊಂದೆಡೆ ಬ್ಯಾಂಕ್‌ನವರು ಸಾಲ ವಸೂಲಾತಿ ಹೆಸರಿನಲ್ಲಿ ರೈತರನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರು.
ಇಂದಿಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆಯಿಲ್ಲದಂತಾಗಿದೆ. ಪ್ರತಿ ತರಕಾ ರಿ ಬೆಳೆ ಹರಾಜಿನ ಮೂಲಕ ಖರೀದಿಸುವ ಕಾನೂನು ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಚಿವರು ದೇಶದ ಬೆನ್ನೆಲುಬಿಗೆ ಮೌಖಿಕವಾಗಿ ಭರವಸೆ ನೀಡದೇ ಇಚ್ಚಾಶಕ್ತಿಯಿಂದ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.ನಿವೃತ್ತ ಶಿಕ್ಷಕ ಪಾಂಡುರಂಗಪ್ಪ ಮಾತನಾಡಿ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನ ಮಧ್ಯಭಾಗದಲ್ಲಿ ಬೀಕನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ತೀವ್ರ ಸಂಕಷ್ಟದ ನರಳಾಡುತ್ತಿವೆ. ಪಕ್ಕದಲ್ಲೇ ಅಯ್ಯನಕೆರೆ ನದಿಯಿದ್ದರೂ ಸುತ್ತಮುತ್ತಲಿನ ರೈತರಿಗೆ ನೀರೋದಗಿಸುತ್ತಿಲ್ಲ. ಕನಿಷ್ಟ ಪಕ್ಷ ಕೋಡಿ ನೀರನ್ನು ಪೈಪ್‌ಲೈನ್ ಮೂಲಕ ಹರಿಸಿದರೆ ಬೇಸಿಗೆಯಲ್ಲಿ ರೈತರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ತಿಳಿಸಿದರು.