ಸಮೀರ್ ಮೊಬೈಲಲ್ಲಿ ಭಾರತ ವಿರೋಧಿ ಮ್ಯಾಪ್‌!

KannadaprabhaNewsNetwork |  
Published : Aug 15, 2026, 03:00 AM IST
Sameer

ಸಾರಾಂಶ

ಕಲಬುರಗಿಯಲ್ಲಿದ್ದುಕೊಂಡೇ ಪಾಕ್ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆಂಬ ಆರೋಪದಡಿ ಬಂಧಿತನಾದ ಮೊಹ್ಮದ್‌ ಸಮೀರ್‌ ಅಲಿಯಾಸ್‌ ಮುನ್ನಾನ ಮೊಬೈಲನ್ನು ತಪಾಸಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳು, ಅದರಲ್ಲಿನ ಭಾರತ ವಿರೋಧಿ ವಿಡಿಯೋ, ಮ್ಯಾಪ್‌ಗಳು, ಉಗ್ರ ನಂಟಿನ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದಾರೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ : ಕಲಬುರಗಿಯಲ್ಲಿದ್ದುಕೊಂಡೇ ಪಾಕ್ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆಂಬ ಆರೋಪದಡಿ ಬಂಧಿತನಾದ ಮೊಹ್ಮದ್‌ ಸಮೀರ್‌ ಅಲಿಯಾಸ್‌ ಮುನ್ನಾನ ಮೊಬೈಲನ್ನು ತಪಾಸಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳು, ಅದರಲ್ಲಿನ ಭಾರತ ವಿರೋಧಿ ವಿಡಿಯೋ, ಮ್ಯಾಪ್‌ಗಳು, ಉಗ್ರ ನಂಟಿನ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದಾರೆ.

ಕಲಬುರಗಿ ಹೊರವಲಯದ ಮಾಲಗತ್ತಿ, ಉಪಳಾಂವ್‌ ಕ್ರಾಸ್‌ ಬಳಿಯ ಮಾಂಸ ರಫ್ತು ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು, ಪಾಕ್‌ ಉಗ್ರ ಸಂಘಟನೆಗಳೊಂದಿಗೆ ನಂಟು ಬೆಸೆದುಕೊಂಡಿದ್ದಾನೆಂಬ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಸಮೀರ್‌ನ ಮೊಬೈಲ್‌ ಜಾಲಾಡಿದಾಗ, ಪಾಕ್‌ ಜೊತೆ ಆತ ನಿರಂತರ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ಈತ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ಆಮಿಷ ಒಡ್ಡಿ ಸೆಳೆಯುತ್ತಿದ್ದನೆಂಬ ಮಾಹಿತಿಯೂ ಗೊತ್ತಾಗಿದೆ.

ಭಯೋತ್ಪಾದಕ ಸಂಘಟನೆಗಳು ಈತನನ್ನು ಭಾರತದಲ್ಲಿ ಯುವಕರ ನೇಮಕಕ್ಕೆ ಹ್ಯಾಂಡ್ಲರ್‌ ರೂಪದಲ್ಲಿ ಬಳಕೆ ಮಾಡುತ್ತಿರೋದು ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶಿ ಮೂಲದ ಸಿಎಂ ಬಳಕೆ:

ಸಮೀರ್‌, ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳನ್ನು ಬಳಕೆ ಮಾಡುತ್ತಿದ್ದ. ವಿದೇಶಿ ನಂಬರ್ ಬಳಸಿಕೊಂಡು ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಹಲವರ ಸಂಪರ್ಕ ಹೊಂದಿದ್ದ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಅಬೀದ್ ಜಟ್, ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿದ್ದಾನೆಂಬ ಸಂಗತಿಯನ್ನೂ ತನಿಖಾ ತಂಡ ಪತ್ತೆ ಹಚ್ಚಿದೆ.ಭಾರತ ವಿರೋಧಿಸುವ ವಿಡಿಯೋ, ಫೋಟೋ:

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಸಮೀರನ ಮೊಬೈಲ್‌ನಲ್ಲಿ ಭಯೋತ್ಪಾದಕ ಸಂಘಟನೆಯವರ ಫೋಟೋ, ವಿಡಿಯೋಗಳು ಪತ್ತೆಯಾಗಿವೆ. ಸಮೀರನ ಮೊಬೈಲನಲ್ಲಿ ಸಿಕ್ಕ ವಿಡಿಯೋಗಳಲ್ಲಿ ಭಾರತ ವಿರೋಧಿಸಿದವರ ವಿಡಿಯೋಗಳೇ ಹೆಚ್ಚಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಮೀರನ ಮೊಬೈಲಲ್ಲಿ ಸಿಕ್ಕ ವಿಡಿಯೋದಲ್ಲಿ ಭಾರತದ ಹಲವು ನಕ್ಷೆ ಸಹ ಚಿತ್ರಿಕರಣವಾಗಿದೆ. ಜಮ್ಮು-ಕಾಶ್ಮಿರವನ್ನು ಭಾರತದಿಂದ ಹೊರಗಿಟ್ಟ ವಿಡಿಯೋ, ಜಮ್ಮು-ಕಾಶ್ಮೀರವನ್ನು ಭಾರತದಿಂದ ಹೊರಗಿಟ್ಟು ಪಾಕಿಸ್ತಾನದ ಜೊತೆ ಜೋಡಿಸಿದ ವಿಡಿಯೋಗಳು ದೊರಕಿವೆ. ಸಮೀರ್‌ ಕಲಬುರಗಿಯಲ್ಲಿದ್ದುಕೊಂಡೇ ಪಾಕ್ ಮೂಲದ ಉಗ್ರ ಗುಂಪುಗಳಾದ ವೆಮನ್ ಮತ್ತು ಜಟ್ 333 ವಾಟ್ಸಪ್ ಗ್ರೂಪ್ ಸದಸ್ಯನಾಗಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ರಾಣಾ ಭಾಯ್ 333 ಗ್ರೂಪ್ ಸೇರಿ ಹಲವು ಗ್ರೂಪ್ ಸದಸ್ಯನಾಗಿರೋದಲ್ಲದೆ ದೇಶ ವಿರೋಧಿ ಚಟುವಟಿಕೆ ಮತ್ತು ಕೋಮು ಸಂಘರ್ಷ ಉಂಟು ಮಾಡುವ ವಿಚಾರಗಳು ಈತನ ಮೊಬೈಲ್ ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್‌ರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಸಲ್ಮಾನ್‌ ಪಾತ್ರ ಅಷ್ಟಾಗಿ ಕಂಡು ಬಾರದ್ದರಿಂದ ಆತನನ್ನು ಬಿಟ್ಟಿರುವ ಪೊಲೀಸರು, ಸದ್ಯ ಸಮೀರ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇವರಿಬ್ಬರೂ ಕಲಬುರಗಿ ಮಾಂಸ ರಫ್ತು ಮಾಡುವ ಎಕ್ಸ್‌ಪೋರ್ಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

ಪಾಕ್ ಫೇಸ್‌ಬುಕ್ ಪೇಜ್‌ ಜತೆ ಸಂಪರ್ಕ:

ಎಟಿಎಸ್ ತಂಡ ಕ್ಷಿಪ್ರ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿಯೂ ಕೆಲವು ನಕ್ಷೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧವಾಗಿಯೂ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಪೊಲೀಸರು ಕೆಲವು ದಿನಗಳಿಂದ ಸತತ ನಿಗಾ ಇಟ್ಟಿದ್ದರು. ಪಾಕಿಸ್ತಾನದ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಫೇಸ್‌ಬುಕ್ ಪೇಜ್ ಹಾಗೂ ಇತರ ದೇಶ ವಿರೋಧಿ ಜಾಲತಾಣಗಳ ಜೊತೆ ಸಮೀರ್ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಇದರ ಆಧಾರದ ಮೇಲೆ ಕಲಬುರಗಿ ಪೊಲೀಸರು ಮತ್ತು ಉತ್ತರ ಪ್ರದೇಶದ ಎಟಿಎಸ್ ತಂಡ ಜಂಟಿಯಾಗಿ ದಾಳಿ ನಡೆಸಿ ಆರೋಪಿ ಸಮೀರನನ್ನು ಬಂಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಕಡಪಟ್ಟಿ ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ