ಹಾವೇರಿ: ಹಿರಿಯ ನಾಗರಿಕರಿಗಾಗಿ ಆಪ್ತ ಸಮಾಲೋಚನೆ ಹಾಗೂ ಪೊಲೀಸ್ ಮಧ್ಯಸ್ಥಿಕೆ, ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ಇಲ್ಲಿಯ ಎಸ್ಪಿ ಕಚೇರಿಯಲ್ಲಿ ಅನುಭವ ಮಂಟಪ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಆರಂಭಿಸಿದ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಮಹಿಳೆಯರ, ಮಕ್ಕಳ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಮಾಡಿಕೊಂಡು ಬಂದಿರುವ ಚಿತ್ರದುರ್ಗದ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯು ಜಿಲ್ಲೆಯಲ್ಲಿ ಅನುಭವ ಮಂಟಪ ಹಿರಿಯ ನಾಗರಿಕರ ಸಹಾಯವಾಣಿ ಆರಂಭಿಸುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಹಿರಿಯ ನಾಗರಿಕರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, ಕಚೇರಿಯಿಂದ ಎಲ್ಲ ಕಾನೂನು ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಪದಕ ಪಡೆದ ಅಡಿಷನಲ್ ಎಸ್ಪಿ ಶಿರಕೋಳ ಅವರನ್ನು ಹಾಗೂ ನಿವೃತ್ತ ನೌಕರರು, ಹಿರಿಯ ನಾಗರಿಕರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಎಸ್ಪಿ ಅಂಶುಕುಮಾರ ಮಾತನಾಡಿ, ಸರ್ಕಾರದಿಂದ ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತೊಂದರೆಯಲ್ಲಿರುವ ಹಿರಿಯರು ತಮ್ಮ ಕಚೇರಿಯ ಸಹಾಯವಾಣಿ 112 ಸಂಪರ್ಕಿಸಲು ಕೋರಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಆಶು ನದಾಫ್, ಚಿತ್ರದುರ್ಗದ ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಪಾಲ್ಗೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯವಾಣಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಶಂಕರಪ್ಪ ವಿ.ಕೆ., ಅನುಭವ ಮಂಟಪ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಿಂದ ಲಭ್ಯವಿರುವ ವೃದ್ಧಾಶ್ರಮ, ಕೌಟುಂಬಿಕ ಸೇವೆ, ವೈದ್ಯಕೀಯ ಸೇವೆ, ರೆಫೆರಲ್ ಸೇವೆ, ಮಾಸಾಶನ, ಹಿರಿಯ ನಾಗರಿಕರ ಗುರುತಿನ ಕಾರ್ಡ್, ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಸಿಪಿಐ ಶಶಿಧರ, ನಿವೃತ ದೈಹಿಕ ಸಮನ್ವಯ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ, ಪ್ರೇಮಾ ಮುಳಗುಂದ, ಧೀರೇಂದ್ರ ಏಕಬೋಟೆ, ಎಚ್.ಆರ್. ಯಡಹಳ್ಳಿ, ದಯಾನಂದ ಕಲಕೋಟಿ, ಮುತ್ತಣ್ಣ ಇತರರು ಇದ್ದರು.