ಶ್ರೀಪಾದಂಗಳರಿಂದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ

KannadaprabhaNewsNetwork |  
Published : Aug 21, 2024, 12:36 AM IST
20ಕೆಪಿಆರ್‌ಸಿಆರ್‌ 01 | Kannada Prabha

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಹಿನ್ನೆಲೆ ಸಪ್ತರಾತ್ರೋತ್ಸವದ ಮೂರನೇ ದಿನ ರಾಯರ ಪೂರ್ವಾರಾಧನೆ ನಿಮಿತ್ತ ತಮಿಳುನಾಡಿನ ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದಿಂದ ಆಗಮಿಸಿದ ಶೇವವಸ್ತ್ರದ ಮೆರವಣಿಗೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠದಲ್ಲಿ ನಡೆಯುತ್ತಿರುವ ಸಪ್ತರಾತ್ರೋತ್ಸವದ ಮೂರನೇ ದಿನವಾದ ಮಂಗಳವಾರ ರಾಯರ ಪೂರ್ವಾರಾಧನೆ ಜರುಗಿತು.

ಪೂರ್ವಾರಾಧನೆ ಹಿನ್ನೆಲೆ ತಮಿಳುನಾಡು ರಾಜ್ಯದ ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದಿಂದ ಆಗಮಿಸಿದ್ದ ಶೇಷವಸ್ತ್ರವನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಸ್ವಾಗತಿಸಿ, ಶ್ರೀಗುರುರಾಯರ ಮೂಲಬೃಂದಾವನದ ಮುಂದಿಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಮಠದ ಪ್ರಾಕಾರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರೆದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿ, ಮಂತ್ರಾಲಯದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಭಕ್ತರಿಗೆ ಅಸೌಕರ್ಯ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.

ಗುರುಸಾರ್ವಭೌಮರ ಆರಾಧನಾ ಮಹೋತ್ಸವಕ್ಕೆ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶದಿಂದಲೂ ಸಂಖ್ಯಾತ ಭಕ್ತರು ಆಗಮಿಸುತ್ತಿದ್ದು, ಇದರೊಟ್ಟಿಗೆ ಹಲವಾರು ತೀರ್ಥ ಕ್ಷೇತ್ರಗಳಿಂದ ಶ್ರೀಗುರುರಾಯರಿಗೆ ಪ್ರಸಾದದ ರೂಪದಲ್ಲಿ ಶೇಷವಸ್ತ್ರಗಳು ಸಹ ಆಗಮಿಸುತ್ತಿವೆ. ಮೊನ್ನೆ ಟಿಟಿಡಿಯಿಂದ ಶ್ರೀವಾರಿ ಶೇವಷವಸ್ತ್ರವನ್ನು ಅತ್ಯಂತ ಗೌರವಪೂರ್ವಕವಾಗಿ ಸ್ವೀಕರಿಸಿದ್ದು, ಇದೀಗ ದೇಶದ ಸ್ವಯಂವ್ಯಕ್ತ ಎಂಟು ಕ್ಷೇತ್ರಗಳಲ್ಲೊಂದಾದ ಶ್ರೀರಂಗಂನ ರಂಗನಾಥ ಸನ್ನಿಧಾನದಿಂದ ಬಂದಿರುವ ಶೇಷವಸ್ತ್ರ ಹಾಗೂ ಗಂಗಾಪ್ರಸಾದವನ್ನು ಸಹ ಗೌರವಪೂರ್ವಕವಾಗಿ ಸ್ವಾಗತಿಸಲಾಗಿದೆ ಎಂದರು.

ಹಿಂದಿನಿಂದಲೂ ಶ್ರೀರಾಯರ ಮಠ ಹಾಗೂ ಶ್ರೀರಂಗಂ ರಂಗನಾಥ ಸ್ವಾಮಿಗಳ ದೇವಸ್ಥಾನಕ್ಕೆ ಅವಿನಾಭಾವ ಬಾಂಧವ್ಯವಿದ್ದು, ರಾಯರು-ಪೂರ್ವದ ಪೀಠಾಧಿಪತಿಗಳು, ಶ್ರೀಮದಾಚಾರ್ಯರು, ನಂತರದ ಪೀಠಾಧಿಪತಿಗಳಾದ ಶ್ರೀಸುಮತೀಂದ್ರ ತೀರ್ಥ ಶ್ರೀಪಾದಂಗಳವರು ಸೇರಿದಂತೆ ಶ್ರೀಮಠದ ಅನೇಕರು ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಈ ವೇಳೆ ಶ್ರೀರಂಗಂ ರಂಗನಾಥ ದೇವಸ್ಥಾನದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ, ಪಂಡಿತರು,ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ಹಾಗೂ ಭಕ್ತರು ಭಾಗವಹಿಸಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು