ರಾಹುಲ್ ಜೀ ದೊಡ್ಮನಿ
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಸಾವಿರಾರು ಬಡವರ, ಕೂಲಿ ಕಾರ್ಮಿಕರ, ಶಾಲಾ ಕಾಲೇಜಿನ ವಿದ್ಯಾರ್ಥಿಗಳ, ಬೀದಿ ಬದಿ ವ್ಯಾಪಾರಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ ಅಫಜಲ್ಪುರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
₹84 ಲಕ್ಷ ವೆಚ್ಚದಲ್ಲಿ ಸಿದ್ದಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯೂ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ. ಏ.4, 2024ರಂದು ಭೂಮಿ ಪೂಜೆಗೊಂಡಿತ್ತು. ಆದರೆ ಕಾಮಗಾರಿ ಆರಂಭವಾಗಿ ಇಂದಿನ ತನಕ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಏ.29ರಂದು ಕಾಮಗಾರಿಯ ರೇಡಿಮೇಡ್ ಗೋಡೆ, ಕಾಲಂ, ಗ್ರಾಫಿಕ್ ಪೇನಲ್, ನೀರಿನ ಟ್ಯಾಂಕ್ ಎಲ್ಲವನ್ನು ಅಳವಡಿಸಲಾಗಿದೆ. ಆದರೆ ಬಾಕಿ ಉಳಿದ ಕೆಲಸ ಮಾಡದೇ ಇರುವುದರಿಂದ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಗ್ರಹಣ ಹಿಡಿದಂತಾಗಿದೆ.ಅಪೂರ್ಣ ಕಾಮಗಾರಿಯಲ್ಲಿ ಖಾಸಗಿ ವಾಹನಗಳ ನಿಲುಗಡೆ:
ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಒಳಭಾಗ ಮತ್ತು ಮುಂಭಾಗದಲ್ಲಿ ಖಾಸಗಿ ದ್ವಿಚಕ್ರ ವಾಹನಗಳು, ಪಿಕ್‌ಅಪ್ ವಾಹನಗಳನ್ನು ತಂದು ನಿಲ್ಲಿಸಲಾಗುತ್ತಿದೆ. ಹೀಗಾಗಿ ಇದು ಇಂದಿರಾ ಕ್ಯಾಂಟೀನೋ ಅಥವಾ ಖಾಸಗಿ ವಾಹನಗಳ ನಿಲುಗಡೆಯ ತಾಣವೋ ಎನ್ನುವಂತಾಗಿದೆ.ಆಮೆಗತಿಯಲ್ಲಿ ಕಾಮಗಾರಿ:
ಇಂದಿರಾ ಕ್ಯಾಂಟೀನ್ ಕಾಮಗಾರಿಯ ಗುತ್ತಿಗೆಯೂ ಎಕ್ಸೇಲ್ ಪ್ರಿಕಾಸ್ ಸಲುಷನ್ಸ್ ಎನ್ನುವವರ ಹೆಸರಿಗೆ ಆಗಿದ್ದು ಬಹುತೇಕ ರಾಜ್ಯಾದ್ಯಂತ ಇದೇ ಸಂಸ್ಥೆಯವರು ಇಂದಿರಾ ಕ್ಯಾಂಟೀನ್ ಕಾಮಗಾರಿ ಮಾಡುತ್ತಿದ್ದಾರೆ. ಹೀಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಲು ವಿಳಂಬವಾಗುತ್ತಿದೆ. ಒಂದೇ ಕಂಪನಿಯವರಿಗೆ ಗುತ್ತಿಗೆ ನೀಡಿದ್ದರಿಂದ ಎಲ್ಲಾ ಕಡೆಗಳಲ್ಲಿ ಕಾಮಗಾರಿ ಮಾಡಲು ಸಾಧ್ಯವಾಗುವುದಿಲ್ಲ. ಆರಂಭಿಕ ಹಂತದಲ್ಲಿ ರೇಡಿಮೇಡ್ ಗೋಡೆ, ಸ್ಲ್ಯಾಬ್, ಟ್ಯಾಂಕ್ ನಿರ್ಮಿಸಿ ಹೋದವರು ಉಳಿದ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ.ಇಂದಿರಾ ಕ್ಯಾಂಟೀನ್ ಉಪಹಾರ ಸಿಗುವುದೆಂದು ಜನರಿಗೆ?:
ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಊಟ, ಉಪಹಾರ ಪೂರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ಆರಂಭಿಸುತ್ತಿದೆ. ಅಫಜಲ್ಪುರ ಪಟ್ಟಣದಲ್ಲೂ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ಊಟ, ಉಪಹಾರ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗುತ್ತಿದೆ. ಆರೇಳು ವರ್ಷಗಳ ಹಿಂದೆ ಇಂದಿರಾ ಕ್ಯಾಂಟೀನ್ ನಿರ್ಮಾಣದ ಚರ್ಚೆಗಳು ನಡೆದು ಕಾಮಗಾರಿಗಾಗಿ ಜಾಗ ವಿಕ್ಷಣೆ ಮಾಡಲಾಗಿತ್ತು. ಆದರೆ ಈಗ ಕಾಮಗಾರಿ ಆರಂಭವಾಗಿ ಅರ್ಧ ಮುಗಿದು ಮುಂದಿನ ಕೆಲಸಗಳಾಗುತ್ತಿಲ್ಲ. ಈ ರಸ್ತೆಯಲ್ಲಿ ಓಡಾಡುವ ಜನ ಇಂದಿರಾ ಕ್ಯಾಂಟೀನ್ ಕಾಮಗಾರಿ ಮತ್ತು ಗ್ರಾಫಿಕ್ ಚಿತ್ರ ನೋಡಿ ಅದ್ಯಾವಾಗ ಕ್ಯಾಂಟೀನ್ ಆರಂಭಗೊಳ್ಳುತ್ತದೆ, ಅದ್ಯಾವಾಗ ಉಪಹಾರ, ಊಟ ಸಿಗುತ್ತದೆ ಎಂದು ಆಸೆಗಣ್ಣಿನಿಂದ ನೋಡುವಂತಾಗಿದೆ.ಪಕ್ಕದಲ್ಲಿ ಪೊಲೀಸ್ ಠಾಣೆ ಇದ್ದರೂ ಕುಡಕರಿಗೆ ಯಾವುದೇ ಅಂಜಿಕೆ ಇಲ್ಲಿಗೆ ಬಂದು ಕುಡಿದು ಮಧ್ಯದ ಬಾಟಲಿಗಳನ್ನು ಬೀಸಾಡುವುದು, ಮಲ, ಮೂತ್ರ ವಿಸರ್ಜನೆ ಮಾಡುವುದು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಸೇವನೆ, ಮಲಮೂತ್ರ ವಿಸರ್ಜನೆ ಮಾಡಬಾರದೆಂಬ ನಿಯಮವಿದ್ದರೂ ಇಲ್ಲಿ ಪಾಲನೆಯಾಗುತ್ತಿಲ್ಲ ಹೀಗಾಗಿ ಜನಸಾಮಾನ್ಯರಿಗೆ ಅನಕೂಲವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಅಪೂರ್ಣ ಕಾಮಗಾರಿಯಿಂದಾಗಿ ಸಮಸ್ಯೆಯಾಗಿ ಕಾಣುವಂತಾಗಿದೆ.
ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು. ರಾತ್ರಿಯಾದರೆ ಇಲ್ಲಿ ಕುಡುಕರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳಿಗೆ ಆತಂಕ ಮೂಡಿಸುತ್ತಿದೆ. ಸಂಬಂಧ ಪಟ್ಟವರು ಬೇಗ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.ಶ್ರೀಕಾಂತ ಕಳ್ಳಿಮಠ, ಪಟ್ಟಣದ ನಿವಾಸಿ