)
- ಶ್ವಾಸಕೋಶ ಸಮಸ್ಯೆ ಹಿನ್ನೆಲೆ ಝೀರೋ ಟ್ರಾಫಿಕ್‌ನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಮಗು ಸಾಗಿಸಲಾಗಿತ್ತು
- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್‌ನಲ್ಲಿ ಕರೆದೊಯ್ಯುತ್ತಿದ್ದ ಮೂರೂವರೆ ತಿಂಗಳ ಕೂಸು ಅನ್ವಿಕಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾ. ಬಂಡಿ ಗ್ರಾಮದ ಹನುಮೇಶ ಹಾಗೂ ಹರಿಹರ ಮೂಲಕ ಪವಿತ್ರಾ ದಂಪತಿಯ ಕೂಸು ಅನ್ವಿಕಾ ಶ್ವಾಸಕೋಶ ಸೋಂಕಿನ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿತ್ತು. ಕಳೆದೊಂದು ವಾರದಿಂದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತುರ್ತು ಚಿಕಿತ್ಸೆಗಾಗಿ ನಗರದಿಂದ 240 ಕಿಮೀ ದೂರದ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಆಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್‌ನಲ್ಲಿ ಕಳಿಸಲಾಗಿತ್ತು.
ದಾವಣಗೆರೆ ಬಾಪೂಜಿ ಆಸ್ಪತ್ರೆಯಿಂದ ಮಗು ಸಾಗಿಸುವ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ, ಉಡುಪಿ ಜಿಲ್ಲಾ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಪ್ರಯತ್ನಕ್ಕೆ ಸ್ಪಂದಿಸಿದ್ದರು. ಪುನಃ ಅದೇ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಮಗುವಿನ ಮೃತದೇಹವನ್ನು ಹರಿಹರಕ್ಕೆ ಸಾಗಿಸಲಾಗಿದೆ. ಝೀರೋ ಟ್ರಾಫಿಕ್ ಮೂಲಕ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸುವ ಪ್ರಯತ್ನ ವ್ಯರ್ಥವಾಗಿದ್ದು ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೂ ತೀವ್ರ ನೋವುಂಟು ಮಾಡಿದೆ.