)
- ಜಿಲ್ಲಾ ವರದಿಗಾರರ ಕೂಟದಿಂದ 2024-25, 2025-26ನೇ ಸಾಲಿನ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ದಾವಣಗೆರೆ
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಿತ್ಯ ಬೆಳಗ್ಗೆ ಪತ್ರಿಕೆ ಓದದಿದ್ದರೆ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ, ದೃಶ್ಯ ಮಾಧ್ಯಮ, ಸೋಷಿಯಲ್ ಮೀಡಿಯಾಗಳಲ್ಲಿ ಏನೇ ಸುದ್ದಿ ನೋಡಿದರೂ ಮಾರನೆಯ ದಿನಪತ್ರಿಕೆ ಓದದಿದ್ದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಿಂದ 2024-25 ಹಾಗೂ 2025-26ನೇ ಸಾಲಿನ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆಗೆ ಗೌರವಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ದೃಶ್ಯ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಆರ್ಭಟ ಹೆಚ್ಚಾಗಿದ್ದರೂ ಎಷ್ಟೇ ವೇಗದಲ್ಲಿ ಜಗತ್ತಿಗೆ ಸುದ್ದಿ ತಲುಪಿದರೂ ಪತ್ರಿಕೆ ಓದಿದ ನಂತರವಷ್ಟೇ ಮನಸ್ಸಿಗೆ ಸಮಾಧಾನ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪತ್ರಕರ್ತರ ಒಳಗಿನ ನೈಜಪ್ರತಿಭೆ ಮತ್ತು ಬರಹಗಳು ಹೊರ ಬರಬೇಕಾದರೆ ಪತ್ರಕರ್ತರರು ಆರ್ಥಿಕವಾಗಿ ಸಬಲರಾಗುವುದು ಅಗತ್ಯ. ಅಂತಹವರಿಗೆ ಜೀವನ ಭದ್ರತೆ, ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ ಕರ್ತವ್ಯವಾಗಬೇಕು. ಮಾಧ್ಯಮವೆಂದರೆ ಬರೀ ಪತ್ರಕರ್ತರಷ್ಟೇ ಅಲ್ಲ, ಬೆಳಗ್ಗೆ ಪತ್ರಿಕೆ ವಿತರಣೆ ಮಾಡುವವರು, ಪ್ರಿಂಟಿಂಗ್ ವಿಭಾಗ ಹೀಗೆ ಅದರ ಹಿಂದೆ ದೊಡ್ಡ ಕುಟುಂಬ ಇದೆ. ಈ ಇಡೀ ವ್ಯವಸ್ಥೆಯ ಹಿತಕಾಯುವ ಕೆಲಸವಾಗಬೇಕು. ಸೂಕ್ತ ಭದ್ರತೆ, ವೈದ್ಯಕೀಯ ವೆಚ್ಚಗಳಿಗೆ ಸರ್ಕಾರದ ಬೆಂಬಲ ಸಿಗಬೇಕಿದೆ ಎಂದರು.
ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೂಟದ ಹಿರಿಯ ಉಪಾಧ್ಯಕ್ಷ ಮಂಜುನಾಥ ಗೌರಕ್ಕಳವರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಕಾನಿಪಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ಪಿಆರ್‌ಒ ಪಿ.ಎಸ್. ಲೋಕೇಶ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಉಪಾಧ್ಯಕ್ಷರಾದ ಸದಾನಂದ ಹೆಗಡೆ, ಸಿದ್ದಯ್ಯ ಹಿರೇಮಠ, ಎ.ಎಲ್. ತಾರಾನಾಥ, ನವದೆಹಲಿಯ ಪಿಟಿಐ ವರದಿಗಾರರಾದ ಲಕ್ಷ್ಮಿದೇವಿ, ಮಾಜಿ ಮೇಯರ್ ಎಸ್.ಟಿ.ವೀರೇಶ ಇತರರು ಇದ್ದರು. ಚೇತನ್ ಬಸಾಪುರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಕಬ್ಬೂರು ಸ್ವಾಗತಿಸಿದರು. ಮಹಾಂತೇಶ್ ಕುರಬೇಟ ನಿರೂಪಿಸಿದರು. ರಾ.ರವಿಬಾಬು ವಂದಿಸಿದರು.
(ಬಾಕ್ಸ್)
2025-26ನೇ ಸಾಲಿನ ಮಾಧ್ಯಮ ಪ್ರಶಸ್ತಿಯನ್ನು ನಗರ ಮಿಡಿತ ಸಂಪಾದಕ ಜಿ.ಎಸ್. ವಸಂತಕುಮಾರ, ಟಿವಿ 5 ವರದಿಗಾರ ಅಣ್ಣಪ್ಪ ಕುಂದುವಾಡ, ಹಿರಿಯ ಪತ್ರಿಕಾ ಛಾಯಾಗ್ರಹಕ ವಿಜಯ್ ಜಾಧವ್, ನಗರವಾಣಿ ವರದಿಗಾರ ಮಹೇಶ ಕಾಶೀಪುರ, ರಿಪಬ್ಲಿಕ್ ಕನ್ನಡ ಕ್ಯಾಮೆರಾಮ್ಯಾನ್ ಶಿವರಾಜ ಇಳಿಗೇರ್ ಅವರಿಗೆ ಪ್ರದಾನ ಮಾಡಲಾಯಿತು. 2025-26ನೇ ಸಾಲಿನ ಜೀವಮಾನ ಸಾಧನೆಗಾಗಿ ವಿಸ್ಮಯವಾಣಿ ಸಂಪಾದಕ ಡಾ. ಬಿ.ವಾಸುದೇವ, ವಾರ್ತಾ ವಿಹಾರ ಸಂಪಾದಕ ಸಿ.ಪಿ. ಸತೀಶಕುಮಾರ, ಜನಸ್ಪಂದನ ಸಂಪಾದಕ ಕೆ.ಉಮೇಶ ಕಾಡಪ್ಪ, ಜನಕ್ರಾಂತಿ ಸಂಪಾದಕ ಕೆ.ಆರ್.ಗಂಗರಾಜು ಅವರಿಗೆ ಜೀವಮಾನ ಸಾಧನೆ ಗೌರವ ನೀಡಿ ಗೌರವಿಸಲಾಯಿತು.
- - -
ಶ್ರೀಶೈಲ ಶ್ರೀಗಳ ಆಶೀರ್ವಚನದ ಒಂದು ಸುದ್ದಿ ಬರಲಿದೆ).
- - -