ಧಾರವಾಡ: ಸ್ಮಾರ್ಟ್ ಸಿಟಿ ಯೋಜನೆ ಅಡಿ ನೀಡಿದ ಕೋಟ್ಯಂತರ ಹಣವನ್ನು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿನ ರಸ್ತೆ, ಚರಂಡಿ ನಿರ್ಮಾಣಕ್ಕೆ ಬಳಸಿದ್ದಾರೆ. ಒಂದು ಸ್ಮರಣೀಯ ಯೋಜನೆ ಜಾರಿಗೊಳಿಸಲು ಜನಪ್ರತಿನಿಧಿಗಳು ಸೇರಿ ಅಧಿಕಾರಿಗಳಲ್ಲೂ ಆಸಕ್ತಿ ಕಂಡಿಲ್ಲ. ಇದೇ ಕಾರಣಕ್ಕೆ ಸ್ಮಾರ್ಟ್ ಸಿಟಿ ಹಣ ಸದ್ಬಳಕೆಯಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಜನಸಂಖ್ಯೆ ಬೆಳವಣಿಗೆಗೆ ತಕ್ಕಂತೆ ನಗರ ಯೋಜನೆ ದೇಶ, ರಾಜ್ಯದಲ್ಲಿ ಅಗತ್ಯವಿದೆ. ಆದರೆ ಆ ಯೋಜನೆ ಸರಿಯಾಗಿ ಇಲ್ಲದ ಕಾರಣ ನಮ್ಮ ನಗರಗಳು ಸರಿಯಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲೇಔಟ್‌ಗಳನ್ನು ನಿರ್ಮಿಸುವವರು ಅಧಿಕಾರಿಗಳಿಗೆ ಹಣ ನೀಡಿ ಒಪ್ಪಿಗೆ ಪಡೆದಿರುತ್ತಾರೆ. ಅಲ್ಲಿ ರಸ್ತೆ, ವಿದ್ಯುತ್ ಸೇರಿ ಯಾವುದೇ ಸೌಲಭ್ಯ ಇರುವುದಿಲ್ಲ. ಆದರೆ, ಕೊನೆಗೆ ರಾಜಕಾರಣಿಗಳ ದುಂಬಾಲು ಬಿದ್ದು ಸೌಕರ್ಯ ಕಲ್ಪಿಸುವಂತೆ ಮನವಿ ಮಾಡುತ್ತಾರೆ. ಇದರಿಂದ ಜನರೂ ಸಮಸ್ಯೆ ಎದುರಿಸುವಂತಾಗಲಿದೆ ಎಂದರು.ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೊರವಿ ಕುಟುಂಬ ಆರಂಭಿಸಿರುವ ಈ ಲೇಔಟ್ ಸುಂದರ ನಗರವಾಗಿ ನಿರ್ಮಾಣವಾಗುವಲ್ಲಿ ಸಂದೇಹವೇ ಇಲ್ಲ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೊರವಿ ನಿರ್ಮಿಸುತ್ತಿರುವ ಈ ಲೇಔಟ್ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಇದೊಂದು ಐಡಿಯಲ್ ಟೌನ್‌ಶಿಪ್ ಆಗುವ ಭರವಸೆ ಇದೆ ಎಂದರು.ಸಂಸದ ಬಸವರಾಜ ಬೊಮ್ಮಾಯಿ, ಕೊರವಿ ಗ್ರೀನ್ ಸಿಟಿಯು ಹು-ಧಾ ನ್ಯೂ ಸ್ಮಾರ್ಟ್ ಸಿಟಿಯಾಗಲಿ. ರಾಜಣ್ಣ ಕೊರವಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಜನರಿಗೆ ನೀಡಲಿ ಎಂದು ಹಾರೈಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರೆಗೆ 5, 10, 15 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುತ್ತಿದ್ದೇವು. ಪ್ರಥಮ ಬಾರಿಗೆ ಬೃಹತ್ ಮಟ್ಟದಲ್ಲಿ ಯೋಜನೆ ರೂಪಿಸಿದ್ದೇವೆ ಎಂದರು.ನಿವೃತ್ತ ನ್ಯಾಯಾಧೀಶರಾದ ಎಸ್. ಸುಜಾತಾ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಿವಪ್ರಭು, ಬಿ.ಎಂ. ಪಾಟೀಲ, ಶಂಕರ ಮುಗದ, ಲೋಕೇಶ ಕೊರವಿ ಮತ್ತಿತರರು ಇದ್ದರು. ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು.
ರಮೇಶ ಕೊರವಿ ವಂದಿಸಿದರು.