ಮಕ್ಕಳ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ । ಮಕ್ಕಳ ಹಕ್ಕುಗಳ ಅರಿವು ಮೂಡಿಸಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಪೋಕ್ಸೋ ಪ್ರಕರಣಗಳಿಂದ ಮಕ್ಕಳನ್ನು ರಕ್ಷಿಸಿ ಕಾಪಾಡಿಕೊಳ್ಳುವುದು ಎಲ್ಲ ಪೋಷಕರ ಕರ್ತವ್ಯವಾಗಿದೆ ಎಂದು ವಕೀಲ ಮಹಾಲಿಂಗಸ್ವಾಮಿ ತಿಳಿಸಿದರು.
ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಸರೆ ಚಾರಿಟಬಲ್ ಟ್ರಸ್ಟ್ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯ ಜಂಟಿಯಾಗಿ ಹಮ್ಮಿಕೊಂಡ ಇತ್ತೀಚೆಗೆ ನಡೆದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹೆಣ್ಣುಮಕ್ಕಳು ಪ್ರೀತಿ, ಪ್ರೇಮಕ್ಕೆ ಮರುಳಾಗಿ ಹೆಚ್ಚು ಪೋಕ್ಸೋ ಪ್ರಕರಣಕ್ಕೆ ಕಾರಣವಾಗುತ್ತಿದೆ. ಮಕ್ಕಳನ್ನು ರಕ್ಷಿಸಿ ಸುರಕ್ಷಿತ ವಾತಾವರಣದಲ್ಲಿ ಬೆಳೆಸಲು ಸಹಾಯ ಮಾಡಲು ಪೋಷಕರು, ಶಿಕ್ಷಕರು ಮತ್ತು ಸಮಾಜ ಸಹಕಾರಿಯಾಗಬೇಕು. ಭಾರತದಲ್ಲಿ ಪ್ರತಿ ವರ್ಷ ನವೆಂಬರ್ ೧೪ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ದಿನದ ಅಂಗವಾಗಿ ಮಕ್ಕಳ ಹಕ್ಕುಗಳಾದ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ನ.೨೦ಕ್ಕೆ ಮಕ್ಕಳ ದಿನ ಆಚರಿಸಿದರೂ ಭಾರತದಲ್ಲಿ ನವೆಂಬರ್ ೧೪ರಂದೇ ಮಕ್ಕಳ ದಿನ ಆಚರಿಸಲಾಗುತ್ತದೆ. ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ತಂದೆ ತಾಯಿಯ ಮಾತನ್ನು ಕೇಳುವ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವಿನಿ, ಅವರು ವಿದ್ಯಾರ್ಥಿಗಳು ಸುಸಂಸ್ಕೃತರಾಗಲು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಗುಣಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕಾನೂನಿನ ಸಲಹೆ ಮತ್ತು ಮೊಬೈಲ್ ಬಳಕೆಯನ್ನು ಒಳ್ಳೆಯ ವಿಷಯಕ್ಕೆ ಮಾತ್ರ ಬಳಸಿ ಎಂದರು.