ಎಸ್.ಐ.ಆರ್ ಪ್ರಕ್ರಿಯೆ ಸ್ಥಗಿತಕ್ಕೆ ಎಪಿಸಿಆರ್ ಆಗ್ರಹ

KannadaprabhaNewsNetwork |  
Published : Dec 09, 2025, 12:30 AM IST
ಪೋಟೋ: 08 ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಪಿಸಿಆರ್(ನಾಗರೀಕ ಹಕ್ಕುಗಳ ರಕ್ಷಣಾ ಸಂಘಟನೆ)ನ ರಾಜ್ಯ ಕಾರ್ಯಕಾರಿ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಬಿ.ಟಿ. ವೆಂಕಟೇಶ್ ಮಾತನಾಡಿದರು.  | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ದೇಶಾದ್ಯಂತ ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಎಪಿಸಿಆರ್(ನಾಗರೀಕ ಹಕ್ಕುಗಳ ರಕ್ಷಣಾ ಸಂಘಟನೆ)ನ ರಾಜ್ಯ ಕಾರ್ಯಕಾರಿ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಬಿ.ಟಿ. ವೆಂಕಟೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ದೇಶಾದ್ಯಂತ ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಎಪಿಸಿಆರ್(ನಾಗರೀಕ ಹಕ್ಕುಗಳ ರಕ್ಷಣಾ ಸಂಘಟನೆ)ನ ರಾಜ್ಯ ಕಾರ್ಯಕಾರಿ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಬಿ.ಟಿ. ವೆಂಕಟೇಶ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದೆ, ಅಸ್ಪಷ್ಟತೆ ಇದೆ. ಅತ್ಯಲ್ಪ ಸಮಯಾವಕಾಶವಿದೆ. ಅಲ್ಲದೆ ಮತದಾನ ಮಾಡಲು ಹುಟ್ಟಿದ ದಿನಾಂಕದ ಪ್ರಮಾಣಪತ್ರವನ್ನು ನೀಡಬೇಕು ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಅಲೆಮಾರಿಗಳು, ಓದೇ ಗೊತ್ತಿಲ್ಲದವರು, ಬಡವರು, ಹುಟ್ಟಿದ ದಿನಾಂಕ ಗೊತ್ತಿಲ್ಲದವರು ಏನುಮಾಡಬೇಕು ಅವರು ಎಲ್ಲಿಂದ ಜನನ ಪ್ರಮಾಣಪತ್ರ ತರಬೇಕು, 80-90 ವರ್ಷ ಆದ ಹಿರಿಯರಿಗೆ ಎಲ್ಲಿ ಗೊತ್ತಿರುತ್ತದೆ. ಅಲ್ಲದೆ ಭಾರತ ಸರ್ಕಾರವೇ ನೀಡಿದ ಆಧಾರ್ ಕಾರ್ಡ್ ಇಲ್ಲವೇ ಆಧಾರ್ ಕಾರ್ಡನ್ನು ಏಕೆ ಗುರುತಿನ ಚೀಟಿ ಎಂದು ಕರೆಯಬಾರದು? ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತ್ತು ಮತದಾನ ಮಾಡಲು ಸರ್ಕಾರವೇ ನೀಡಿದ ಪಡಿತರ ಕಾರ್ಡ್ ಮತ್ತು ಈಗಾಗಲೇ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಸಾಕಲ್ಲವೇ ? ಹೀಗಿದ್ದು ಹುಟ್ಟಿದ ದಿನಾಂಕದ ಪ್ರಮಾಣ ಪತ್ರ ಏಕೆ ? ಎಂದು ಪ್ರಶ್ನೆ ಮಾಡಿದರು.

ಈ ಪ್ರಕ್ರಿಯೆಯು ಬಡವರು, ಗ್ರಾಮೀಣ ಮಹಿಳೆಯರು, ವಯೋವೃದ್ಧರು, ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ. ಇದು ಸಂವಿಧಾನದ 14, 15, 21ನೇ ವಿಧಿಗಳಿಗೆ ವಿರುದ್ಧವಾಗಿದೆ. ಲಕ್ಷಾಂತರ ನಾಗರೀಕರನ್ನು ಅನಾಗರೀಕ ಎಂಬ ಗುರಿಯಿಂದ ಹೊರಗಿಟ್ಟು ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕ ಸಮಾಲೋಚನೆ ಮತ್ತು ನಾಗರೀಕ ಸ್ನೇಹಿ ಚೌಕಟ್ಟು ರೂಪಿಸುವವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದರು.

ಎಪಿಸಿಆರ್‌ನ ರಾಜ್ಯ ಸಮಿತಿ ಉಪಾಧ್ಯಕ್ಷ ಅಖೀಲ ವಿದ್ಯಾಸಂದ್ರ ಮಾತನಾಡಿ, ನಮ್ಮ ಸಂಘಟನೆಯು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಾ ಬಂದಿದೆ. ಮಹಿಳೆಯರ ಮೇಲೆ, ಅಲ್ಪಸಂಖ್ಯಾತರ ಮೇಲೆ, ದಲಿತರ ಮೇಲೆ ನಡೆಯುವ ಶೋಷಣೆ, ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ 25 ವರ್ಷಗಳಿಂದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಹೆಸರಿನಲ್ಲಿ ಈ ಸಂಸ್ಥೆ ಜನ್ಮತಾಳಿ, 18 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಇದೀಗ ಶಿವಮೊಗ್ಗ ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದೆ. ಶಿವಮೊಗ್ಗದಲ್ಲಿಯೂ ಕೂಡ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ನಮ್ಮ ಸಂಘಟನೆ ನಿರಂತರವಾಗಿ ಹೋರಾಡುತ್ತಾ ಬರುತ್ತದೆ ಎಂದರು.

ಜಿಲ್ಲಾ ಸಮಿತಿ ಅಧ್ಯಕ್ಷೆ ಸರೋಜಾ ಪಿ. ಚಂಗೊಳ್ಳಿ ಮಾತನಾಡಿ, ಇದು ರಾಷ್ಟ್ರಮಟ್ಟದ ಸಂಘಟನೆ. ಈಗ ಕಳೆದ ಕೆಲವು ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಈಗಾಗಲೇ ಪದಾಧಿಕಾರಿಗಳ ನೇಮಕ ಕೂಡ ಆಗಿದೆ. ಈ ವರ್ಷ ಸುಮಾರು ೫೦ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ 15 ಕಾರ್ಯಕ್ರಮಗಳನ್ನು ನಾವು ಪೂರೈಸಿದ್ದೇವೆ. ಶಾಲಾ-ಕಾಲೇಜುಗಳಲ್ಲಿ ಕಾನೂನುಗಳ ಅರಿವು ಉಚಿತ ಕಾನೂನು ಸಹಾಯ, ಕೈದಿಗಳ ಬಿಡುಗಡೆಗಾಗಿ ಹೋರಾಟ, ಗಾಂಜಾ ವಿರುದ್ಧ ಹೋರಾಟ, ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು, ಮೌಲ್ಯಗಳ ಮನವರಿಕೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಎಪಿಸಿಆರ್‌ನ ರಾಜ್ಯ ಕಾರ್ಯಕಾರಿ ಸದಸ್ಯ ಮುಹಮ್ಮದ್ ಕುಂಹಿ, ಕಚೇರಿ ಕಾರ್ಯದರ್ಶಿ ನೌಫುಲ್ ಮಾರ್ಜೂಕಿ ಇದ್ದರು.

ನೂತನ ಸಮಿತಿ ಅಸ್ಥಿತ್ವಕ್ಕೆ

ಎಪಿಸಿಆರ್‌ನ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಆರ್.ಟಿ. ನಟರಾಜ್, ಜಿಲ್ಲಾಧ್ಯಕ್ಷರಾಗಿ ಸರೋಜಾ ಪಿ. ಚಂಗೊಳ್ಳಿ, ಉಪಾಧ್ಯಕ್ಷರಾಗಿ ಹಾಲೇಶಪ್ಪ, ರಾಜಮ್ಮ, ಸೈಯದ್ ಲಿಯಾಖತ್, ಅಬ್ದುಲ್ ವಾಹಬ್, ಮಹಮ್ಮದ್ ಅಯೂಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ರಫೀ, ಜಂಟಿ ಕಾರ್ಯದರ್ಶಿಗಳಾಗಿ ರಮ್ಯ, ದೇವೇಂದ್ರಪ್ಪ, ಹಬೀಬುಲ್ಲಾ, ಖಜಾಂಚಿಯಾಗಿ ಸುಕನ್ಯಾ, ಸಂಘಟನಾ ಕಾರ್ಯದರ್ಶಿಯಾಗಿ ಚನ್ನವೀರಪ್ಪ ಗಾಮನಗಟ್ಟಿ ನೇಮಕಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರಿಗೂ ಸಮಾನತೆ ತಂದು ಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್: ಲಿಂಗರಾಜಮೂರ್ತಿ
ಜೇಸಿ ಸಂಸ್ಥೆಯಿಂದ ದೇಶದ ಮುಂದಿನ ನಾಯಕರ ಉದಯ: ಪ್ರಜ್ವಲ್ ಎಸ್. ಜೈನ್