ಎಪಿಎಂಸಿ ಗೋದಾಮು ಬಾಡಿಗೆ ನಿಯಮ ಉಲ್ಲಂಘನೆ: ಆರೋಪ

KannadaprabhaNewsNetwork |  
Published : May 31, 2025, 12:18 AM IST
ತಾಲೂಕು ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಎಪಿಎಂಸಿ ಸಹ ಕಾರ್ಯದರ್ಶಿ ಬಿ.ಎಸ್. ಗೌಡರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಬಾಸೂರು ಗ್ರಾಮದಲ್ಲಿ ಕೋಟಿಗಟ್ಟಲೇ ಅನುದಾನದಲ್ಲಿ ಸಾವಿರ ಮೆಟ್ರಿಕ್ ಟನ್ ಸಂಗ್ರಹದ ಗೋದಾಮು 2017ರಲ್ಲಿ ನಿರ್ಮಿಸಿದೆ. ಈವರೆಗೂ ಕಟ್ಟಡವನ್ನು ಹಾಳು ಬಿಟ್ಟಿದ್ದಲ್ಲದೇ, ಕಳೆದೊಂದು ವರ್ಷದಿಂದ ಖಾಸಗಿ ವ್ಯಾಪಾರಸ್ಥರು ಮತ್ತು ಕೆಲ ವ್ಯಕ್ತಿಗಳಿಗೆ ನಿಯಮಾನುಸಾರ ಯಾವುದೇ ಟೆಂಡರ್ ಕರೆಯದೇ ಬಾಡಿಗೆ ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬ್ಯಾಡಗಿ: ತಾಲೂಕಿನ ಚಿಕ್ಕಬಾಸೂರು ಗ್ರಾಮದ ಎಪಿಎಂಸಿ ಗೋದಾಮನ್ನು ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ನಿಗದಿಪಡಿಸದೇ ನಿಯಮ ಉಲ್ಲಂಘಿಸಿ ನೀಡಿರುವ ಎಪಿಎಂಸಿ ಕಾರ್ಯದರ್ಶಿ ಹಾಗೂ ನಿಯೋಜಿತ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಎಪಿಎಂಸಿ ಸಹ ಕಾರ್ಯದರ್ಶಿ ಬಿ.ಎಸ್. ಗೌಡರ ಅವರಿಗೆ ಮನವಿ ಸಲ್ಲಿಸಿದರು.ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಮಾತನಾಡಿ, ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಕೋಟಿಗಟ್ಟಲೇ ಅನುದಾನದಲ್ಲಿ ಸಾವಿರ ಮೆಟ್ರಿಕ್ ಟನ್ ಸಂಗ್ರಹದ ಗೋದಾಮು 2017ರಲ್ಲಿ ನಿರ್ಮಿಸಿದೆ. ಈವರೆಗೂ ಕಟ್ಟಡವನ್ನು ಹಾಳು ಬಿಟ್ಟಿದ್ದಲ್ಲದೇ, ಕಳೆದೊಂದು ವರ್ಷದಿಂದ ಖಾಸಗಿ ವ್ಯಾಪಾರಸ್ಥರು ಮತ್ತು ಕೆಲ ವ್ಯಕ್ತಿಗಳಿಗೆ ನಿಯಮಾನುಸಾರ ಯಾವುದೇ ಟೆಂಡರ್ ಕರೆಯದೇ ಬಾಡಿಗೆ ನಿರ್ಧರಿಸಿದೆ. ಶುಲ್ಕ ತುಂಬಿಸಿಕೊಳ್ಳದೇ ಉಚಿತವಾಗಿ ನೀಡುವ ಮೂಲಕ ಎಪಿಎಂಸಿ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸಿದ ಬಳಿಕ ಅಧಿಕಾರಿಗಳು ಮುಚ್ಚಿ ಹಾಕುವ ಯತ್ನ ನಡೆಸಿದ್ದು, ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಅಧಿಕಾರಿಗಳು ನೇರವಾಗಿ ಶಾಮೀಲಾಗಿ ಸರ್ಕಾರಕ್ಕೆ ಜಮೆಯಾಗಬೇಕಿದ್ದ ಶುಲ್ಕ ಹಾನಿಗೊಳಿಸಿದ್ದಾರೆ. ಇಂತಹ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ವಿರುದ್ಧ ಜಿಲ್ಲಾಧಿಕಾರಿಯವರು ಕಾನೂನು ಕ್ರಮ ಜರುಗಿಸಬೇಕು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಗೋದಾಮಿನಲ್ಲಿ ನಿಯಮಬಾಹಿರವಾಗಿ ಗೋವಿನ ಜೋಳದ ಚೀಲಗಳನ್ನು ಇಟ್ಟಿದ್ದು, ವಿವಿಧ ಸಂಘಟನೆಗಳು ಎಪಿಎಂಸಿ ಸೇರಿದಂತೆ ಮೇಲಧಿಕಾರಿಗಳಿಗೆ ದೂರು ನೀಡಿದ ಬಳಿಕ ಬ್ಯಾಡಗಿ ಎಪಿಎಂಸಿ ಸಿಬ್ಬಂದಿ ಬೀಗ ಹಾಕಿದ್ದಾರೆ. ಆದರೆ ಶುಕ್ರವಾರ ಹಾಕಿದ್ದ ಬೀಗವನ್ನು ಒಡೆದು ಒಳಗೆ ಸಂಗ್ರಹಿಸಿದ್ದ ಗೋವಿನಜೋಳದ ಚೀಲಗಳನ್ನು ಏಕಾಏಕಿ ಲಾರಿಯಲ್ಲಿ ಹೇರುತ್ತಿರುವ ವಿಡಿಯೋ ಎಲ್ಲೆಡೆ ಓಡಾಡುತ್ತಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ ಎಂದರು.ಉಪ ಕಾರ್ಯದರ್ಶಿ ಬಿ.ಎಸ್. ಗೌಡರ ಮಾತನಾಡಿ, ನಾವು 15 ದಿನಗಳ ಹಿಂದೆ ಗೋದಾಮಿಗೆ ತೆರಳಿ ಎಪಿಎಂಸಿ ಭದ್ರತಾ ಸಿಬ್ಬಂದಿ ಎದುರಲ್ಲಿ ಬೀಗ ಹಾಕಿ ಬಂದಿದ್ದೇವೆ. ಆದರೆ ಈಗ ಬೀಗ ಒಡೆದಿರುವುದು ತಿಳಿದುಬಂದಿದ್ದು, ಸರ್ಕಾರದ ನಿಯಮ ಗಾಳಿಗೆ ತೂರಿ ಕಟ್ಟಡದ ಒಳಗೆ ಅನುಮತಿಯಿಲ್ಲದೇ ಹೋದವರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಸರ್ಕಾರಿ ಕಟ್ಟಡ ಬೀಗ ಒಡೆದು ಖಾಸಗಿ ವ್ಯಕ್ತಿಗಳ ಕುರಿತು ಯಾವುದೇ ದೂರು ದಾಖಲಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಚನ್ನಗೌಡ್ರ, ಜಗದೀಶ ಮಠದ, ನಾಗರಾಜ ಹಿರೇಮಠ, ಮಂಜುನಾಥ ಅಡಗಂಟಿ ಇತರರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್