ಸಂಸ್ಕೃತ ಮನೆ ಮನೆಗಳಲ್ಲಿ ಮೊಳಗಬೇಕು: ಕೆ.ಸುಚೇಂದ್ರ ಪ್ರಸಾದ್

KannadaprabhaNewsNetwork |  
Published : May 31, 2025, 12:17 AM IST
ಪೋಟೋ: 30ಎಸ್‌ಎಂಜಿಕೆಪಿ02ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಸಂಸ್ಕೃತ ಭಾರತಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಶಿವಮೊಗ್ಗ ಗಿರ್ವಾಣಭಾರತಿ ಘಟಕ, ಶ್ರೀ ಆದಿಚುಂಚನಗಿರಿ ಕ್ಷೇತ್ರ ಇವರ ಸಹಯೋಗದಲ್ಲಿ ಹಿಮಾಲಯದ ಕುಲು ತಪ್ಪಲಿನಲ್ಲಿರುವ ರೋಲಿ ಖೋಲಿ ಹಿಮಾಲಯ ಪರ್ವತದಲ್ಲಿ ಶುಕ್ರವಾರ ಸಂಸ್ಕೃತ ಧ್ವಜಾರೋಹಣವನ್ನು ನೆರವೇರಿಸಲಾಯಿತು. | Kannada Prabha

ಸಾರಾಂಶ

ಹಿಮಾಲಯದ ಶಿಖರದಿಂದ ಭಾರತದ ಪ್ರತಿ ಮನೆ ಮನೆ ಗಳಲ್ಲಿ ಸಂಸ್ಕೃತ ವಾಣಿ ಮೊಳಗಬೇಕು ಎಂದು ಕನ್ನಡ ಹಾಗೂ ಸಂಸ್ಕೃತ ಭಾಷೆಯ ಪ್ರಸಿದ್ಧ ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ತಿಳಿಸಿದರು.

ಸಂಸ್ಕೃತ ಧ್ವಜಾರೋಹಣ । ಕುಲಿ ತಪ್ಪಲಿನ ರೋಲಿ ಖೋಲಿ ಹಿಮಾಲಯ ಪರ್ವತದಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಮಾಲಯದ ಶಿಖರದಿಂದ ಭಾರತದ ಪ್ರತಿ ಮನೆ ಮನೆ ಗಳಲ್ಲಿ ಸಂಸ್ಕೃತ ವಾಣಿ ಮೊಳಗಬೇಕು ಎಂದು ಕನ್ನಡ ಹಾಗೂ ಸಂಸ್ಕೃತ ಭಾಷೆಯ ಪ್ರಸಿದ್ಧ ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ತಿಳಿಸಿದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಸಂಸ್ಕೃತ ಭಾರತಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಶಿವಮೊಗ್ಗ ಗಿರ್ವಾಣ ಭಾರತಿ ಘಟಕ ಶ್ರೀ ಆದಿಚುಂಚನಗಿರಿ ಕ್ಷೇತ್ರ ಜಂಟಿಯಾಗಿ ಹಮ್ಮಿಕೊಂಡಿದ್ದ ಹಿಮಾಲಯದ ಕುಲು ತಪ್ಪಲಿನಲ್ಲಿರುವ ರೋಲಿ ಖೋಲಿ ಹಿಮಾಲಯ ಪರ್ವತದಲ್ಲಿ ಶುಕ್ರವಾರ ಸಂಸ್ಕೃತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ದೇಶದ ಎಲ್ಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ಇಂತಹ ಹಿಮಾಲಯ ಚಾರಣ ಪ್ರತಿಯೊಂದು ವಿಶ್ವವಿದ್ಯಾಲಯಗಳು ಅನುಸರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಸ್ವಯಂಕೃತವಲ್ಲದ, ಆದರೆ ಸಂಸ್ಕರಣಗೊಂಡ ವಿಶ್ವಭಾಷೆಯೇ ‘ಸಂಸ್ಕೃತ’ ಎಂಬುದು ಸರ್ವವಿದಿತ.

‘ಸರ್ವಭಾಷಾಮಯೀಭಾಷಾ’ ಎಂಬ ತಲೆಬರೆಹದೊಂದಿಗೆ ‘ಪ್ರಾಕೃತ’ವು ಪ್ರಸಕ್ತಕ್ಕೂ ಸಲ್ಲಿಕೆಯಾಗಿ ಅತ್ಯಂತ ‘ವೈಜ್ಞಾನಿಕ ಸಂವಹನ ಸಾಧನ’ವಾಗಿ ದಕ್ಕುತ್ತಿರುವುದು ಗಮನೀಯ ಎಂದು ಹೇಳಿದರು.

ಗೀರ್ವಾಣವಾಣಿಯ ಕುರಿತು ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬ ಏಕಮೇವ ಕಾರಣಕ್ಕೆ ಇಡಿಯ ಜ್ಞಾನಶಾಖೆಯೊಂದನ್ನು ದೂರವಿಡುವುದರಿಂದ ಭರತಖಂಡದ ಪಾರಂಪರಿಕ ಅಸ್ಮಿತೆ ಲುಪ್ತವಾಗದಂತೆ ತಡೆಯಲು ದೇಶದಾದ್ಯಂತ ಪಸರಿಸಿರುವ ಸಂಸ್ಕೃತ ಪ್ರೇಮವುಳ್ಳ ಹಿತೈಷಿಗಳು ಅನೂಹ್ಯವಾದಂತಹ ಅನೇಕಾನೇಕ ಸಂಬದ್ಧ ಚಟುವಟಿಕೆಗಳಲ್ಲಿ ತೊಡಗಿರುವುದೂ ದಾಖಲುಯೋಗ್ಯವೇ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದೇವಾನುದೇವತೆಗಳ ಆವಾಸ ಸ್ಥಾನವೇ ಹಿಮಾಲಯವೆಂಬ ಅಚಲ ನಂಬುಗೆಯ ಭಾರತೀಯರ ಪ್ರತಿ ಮನೆ - ಮನಂಗಳು ಸಂಸ್ಕೃತಭೂಯಿಷ್ಠವೆಂದೂ, ಅರಿವಿನ ಹಿಮವೆಂದೂ ಲಯವಾಗದಿರಲೆಂಬ ಶುಭೇಚ್ಛೆಯ ಅರುಹಲೆಂದೇ ಪ್ರಾತಿನಿಧಿಕವಾಗಿ ದೇಶವ್ಯಾಪಿ ಸಂಸ್ಕೃತ ವ್ಯಾಸಂಗ ಗೈಯ್ಯುತ್ತಿರುವ ಸುಮನಸ್ಕರ ದಂಡು ಇಂದಿನ ಸಂಸ್ಕ್ರತ ಧ್ವಜಾರೋಹಣಕ್ಕೆ ಸಾಕ್ಷಿಯಾದುದೂ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯಲಿದೆ ಎಂದರು.

ಅನಾದಿ ಕಾಲದಿಂದಲೂ ಮನುಷ್ಯರ ಅನೇಕ ಸುಚೇಷ್ಟೆಗಳಿಗೆ ಮೌನಸಾಕ್ಷಿಯಾಗಿ ನಿಂತಿರುವ ಹಿಮವತ್ಪರ್ವತದ ಈ ಹನ್ನೆರೆಡು ಸಾವಿರ ಅಡಿಗಳೆತ್ತರದ ಶಿಖರಪ್ರಾಯ ಸಾಧನೆಯು ದೇಶಬಂಧುಗಳೆಲ್ಲರ ಸಂಸ್ಕೃತಪ್ರೇಮವನ್ನು ಚಿರಂತನ ಉದ್ದೀಪಿಸುವಂತಾಗಲೆಂಬ ಶುಭೇಚ್ಛೆಯೊಂದಿಗೆ ಸಂಸ್ಕೃತ ಮನೆ ಮನೆಗಳಲ್ಲಿ ಮೊಳಗಲಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಚಾರಣದ ರೂವಾರಿ ನವೀನ ಚಂದ್ರ ತಿವಾರಿ, ಶೇಮ್ಸ್, ತಾರಾಚಂದ್, ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ರಾಜು ಮೌರ್ಯ, ವಿಜಯ್ ಮಹಾರಾಷ್ಟ್ರ ಚಾರಣಿಗರಾದ ಡಾ.ಅಜಯ್, ಡಾ.ಮಂಜೂಷ ಇತರರು ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್