ಸಿಎಂ ಅಪಘಾತ ಪರಿಹಾರ ನಿಧಿಗಾಗಿ ಒತ್ತಾಯಿಸಿ ಮನವಿ

KannadaprabhaNewsNetwork |  
Published : Jun 17, 2026, 02:30 AM IST
ಗಜೇಂದ್ರಗಡ ಜಿಗಳೂರು ಬಳಿ ವಾಹನ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ೧೫ ದಿನದೊಳಗೆ ಸಿಎಂ ಪರಿಹಾರ ನಿಧಿ ಒದಗಿಸಲು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ನೀಡಲಾಯಿತು. | Kannada Prabha

ಸಾರಾಂಶ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿಕಾರ್ಮಿಕ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ೧೫ ದಿನದೊಳಗೆ ತಲುಪಿಬೇಕು ಎಂದು ಮನವಿ ಸಲ್ಲಿಸಲಾಯಿತು.

ಗಜೇಂದ್ರಗಡ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿಕಾರ್ಮಿಕ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ೧೫ ದಿನದೊಳಗೆ ತಲುಪಿಸದಿದ್ದರೆ ಸಂತ್ರಸ್ತ ಕುಟುಂಬಗಳೊಂದಿಗೆ ಶಾಸಕರ ಮನೆಗೆ ಪಾದಾಯಾತ್ರೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಕಾರರ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಮೂಲಕ ಸಿಎಂ ಹಾಗೂ ಶಾಸಕರಿಗೆ ಮಂಗಳವಾರ ಮನವಿ ನೀಡಿದರು.

ಈ ವೇಳೆ ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ರೋಣ ತಾಲೂಕಿನ ಜಿಗಳೂರು ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟು 4 ತಿಂಗಳು ಗತಿಸಿವೆ. ಆದರೆ ಮೃತ ಕುಟುಂಬಗಳಿಗೆ ಪರಿಹಾರ ದೊರಕಿಲ್ಲ. ಪರಿಹಾರ ನಿಧಿ ಎಂಬುದು ಮಾನವೀಯ ನೆಲೆಗಟ್ಟಿನ ಮೇಲೆ ನೀಡುವುದಾಗಿದೆ, ಹೊರತು ತಿಂಗಳಾನುಗಟ್ಟಲೆ ಅಲೆದಾಡಿಸಿ ಕೊಡುವ ಪರಿಹಾರವಲ್ಲ. ನೆರೆಯ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆದ ಅಪಘಾತ ವೇಳೆ ಮೃತಪಟ್ಟ ಹಾಗೂ ಗಾಯಾಳುಗಳಿಗೆ ಕೆಲ ದಿನಗಳಲ್ಲಿಯೇ ಪರಿಹಾರ ದೊರೆತ ವರದಿಗಳಿವೆ. ಆದರೆ, ರೋಣ ಮತಕ್ಷೇತ್ರದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟು ೪ ತಿಂಗಳು ಗತಿಸಿದ್ದರೂ ಸಿಎಂ ಪರಿಹಾರ ನಿಧಿ ಸಿಕ್ಕಿಲ್ಲ ಎಂದರೆ ಇಲ್ಲಿನ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮನೆಯ ಜವಾಬ್ದಾರಿ ಹೊತ್ತಿದ್ದವರೇ ಅಪಫಾತದಲ್ಲಿ ಮೃತಪಟ್ಟಿದ್ದರಿಂದ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೃತರ ಕುಟುಂಬಗಳಿಗೆ ₹೫ ಲಕ್ಷ ಪರಿಹಾರ ಕೊಡಿಸಿ ಎಂದು ಬೇಡಿಕೊಂಡರೆ ಶಾಸಕರು ₹೨ ಲಕ್ಷದ ಪರಿಹಾರದ ಭರವಸೆ ನೀಡಿದ್ದರು. ಆದರೆ, ಸಿಎಂ ಬದಲಾವಣೆ ಆದರೂ ಶಾಸಕರು ನೀಡಿದ್ದ ಭರವಸೆ ಈಡೇರಿಲ್ಲ.

ಸಚಿವ ಸ್ಥಾನಕ್ಕೆ ಜಿಲ್ಲಾದ್ಯಂತ ಹೋರಾಟ, ಆಗ್ರಹ ನಡೆಯುತ್ತಿವೆ. ಶಾಸಕ ಸ್ಥಾನ ಸರಿಯಾಗಿ ನಿರ್ವಹಣೆ ಮಾಡಲು ಆಗದ ನೀವು, ನಿಮಗೆ ಸಚಿವ ಸ್ಥಾನ ಬೇಕಾ ಎಂದು ಪ್ರಶ್ನಿಸಿದರು. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರು ಹುಲಕೋಟಿಗೆ ಮಾತ್ರ ಸಿಮೀತವಾಗಿದ್ದರು. ನಮ್ಮ ಜಿಲ್ಲೆಯ ೩ ಕೂಲಿಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಸಿಎಂಗೆ ಗಂಭೀರವಾಗಿ ತಗೆದುಕೊಳ್ಳಲು ಹೇಳಿ ತಕ್ಷಣ ಪರಿಹಾರ ಕೊಡಿಸುವ ಕೆಲಸವಾಗಿಲ್ಲ. ಹೀಗಾಗಿ, ಶಾಸಕರು ಘಟನೆಯನ್ನು ಸಂವೇಧನಾಶೀಲರಾಗಿ ಪರಿಗಣಿಸಬೇಕು. ಅಪಘಾತ ದಿನ ದೊಡ್ಡ, ದೊಡ್ಡ ಮಾತುಗಳನ್ನಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಬಡವರು ಸತ್ತಿದ್ದಾರೆ ಅವರಿಗೆ ಪರಿಹಾರ ಕೊಡಿಸಲೇಬೇಕು ಎಂದು ಶಾಸಕರನ್ನು ಏಕೆ ಕೇಳುತ್ತಿಲ್ಲ ಎಂದರು.

"ಕೂಲಿಕಾರ್ಮಿಕರು ಮೃತಪಟ್ಟು ೫ ತಿಂಗಳೂ ಸಮೀಪಿಸುತ್ತಿದ್ದರೂ ಸಂತ್ರಸ್ತ ಕುಟುಂಬಗಳು ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಹೀಗಾಗಿ, ೧೫ ದಿನದೊಳಗೆ ತಾಲೂಕಾಡಳಿತ ಅಪಘಾತದಲ್ಲಿ ಮೃತಪಟ್ಟ ಕುಟುಂಗಳಿಗೆ ಸಿಎಂ ಪರಿಹಾರ ನಿಧಿ ದೊರಕಿಸಿಕೊಡವಲ್ಲಿ ವಿಫಲವಾದರೆ ಪಟ್ಟಣದಿಂದ ಮೃತರ ಭಾವಚಿತ್ರ ಹಿಡಿದು ಪಾದಯಾತ್ರೆ ಮೂಲಕ ಶಾಸಕರ ನಿವಾಸಕ್ಕೆ ತೆರಳುತ್ತೇವೆ " ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು. ಈ ವೇಳೆ ದಾವಲಸಾಬ ತಾಳಿಕೋಟಿ, ಐ.ಬಿ. ಹಾಳಕೇರಿ, ಆರ್.ವೈ. ಕೇಶಣ್ಣವರ, ರಾಜಪ್ಪ ಹೊಸಮನಿ, ಮೈಬು ಹುನಗುಂದ, ಎಚ್.ಎಚ್. ತಹಸೀಲ್ದಾರ್, ಶಶಿಧರ ಗೌಡರ, ಆನಂದ ಮರಾಠಿ, ಚಂದ್ರು ಚಂಗಳಿ, ಮಂಜುನಾಥ ಚವ್ಹಾಣ ಸೇರಿ ಅಪಾಘತದಲ್ಲಿ ಮೃತಪಟ್ಟ, ಅಪಘಾತದಲ್ಲಿ ಗಾಯಾಳುಗಳಾದ ಕುಟುಂಬಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಲಡ್ ಡೋನರ್ಸ್ ಕಾರವಾರ ತಂಡದ ದಶಮಾನೋತ್ಸವ
ವಿದ್ಯಾರ್ಥಿ ಸಾವು: ಸಮರ್ಪಕ ತನಿಖೆಗೆ ಆಗ್ರಹಿಸಿ 18ರಂದು ಪ್ರತಿಭಟನೆ