ನರಸಿಂಹರಾಜಪುರ: ಕೊಯ್ಲಿಗೆ ಬಂದ ಹಸಿ ಅಡಕೆ ಕೆಡದಂತೆ ವೈಜ್ಞಾನಿಕವಾಗಿ ಶೇಖರಣೆ ಮಾಡುವ ಬಗ್ಗೆ ಸಂಶೋಧನೆ ನಡೆಸುವಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರಿಗೆ ಕೃಷಿಕರ ತಂಡದಿಂದ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದ್ದಾರೆ.
ರೈತರು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಸ್ವಾವಲಂಭಿಗಳಾಗಿ ಬದುಕಬೇಕು. ಹಸಿ ಅಡಕೆಯನ್ನು ವೈಜ್ಞಾನಿಕವಾಗಿ ಶೇಖರಿಸಿಟ್ಟರೆ ಇದರ ನೈಜತೆ ಎಷ್ಟು ದಿನ ಉಳಿಯಬಲ್ಲದು ಎಂಬುದರ ಬಗ್ಗೆ ಇಂದಿನಿಂದಲೇ ಸಂಶೋಧನೆ ನಡೆಸಲು ಅಡಕೆ ಸಂಶೋಧನಾ ತಂಡದ ಮುಖ್ಯಸ್ಥ ಡಾ.ನಾಗರಾಜಪ್ಪ ಅವರಿಗೆ ಸೂಚಿಸುತ್ತೇನೆ ಎಂದು ಅವರು ಭರವಸೆ ನೀಡಿದರು ಎಂದು ಪಿ.ಕೆ.ಬಸವರಾಜಪ್ಪ ವಿವರಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ನರಸಿಂಹರಾಜಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಬಸವರಾಜಪ್ಪ, ಶೃಂಗೇರಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲಹೆಗ್ಡೆ, ಬಿ.ಕೆ.ಜಾನಕೀರಾಂ, ವಿಜ್ಞಾನಿ ಡಾ.ನಾಗರಾಜಪ್ಪ ಅಡಿವಪ್ಪರ್, ಎಂ.ಜಿ.ರೋಹಿತ್ ಇದ್ದರು ಎಂದು ಅವರು ತಿಳಿಸಿದ್ದಾರೆ.