ಶಿರಹಟ್ಟಿ: ಪಟ್ಟಣದಲ್ಲಿ ಜ. ೩೧ರಂದು ನಡೆಯಲಿರುವ ಶೋಭಾಯಾತ್ರೆ ಕಾರ್ಯಕ್ರಮವು ಹಿಂದುಗಳನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದು, ಶಿರಹಟ್ಟಿ ಹೋಬಳಿ ಮಟ್ಟದ ವ್ಯಾಪ್ತಿಯ ೨೮ ಗ್ರಾಮೀಣ ಪ್ರದೇಶಗಳು ಹಾಗೂ ಪಟ್ಟಣ ಸೇರಿದಂತೆ ಅಪಾರ ಹಿಂದೂ ಕಾರ‍್ಯಕರ್ತರ ಬೃಹತ್ ಶೋಭಾಯಾತ್ರೆಯೊಂದಿಗೆ ಸಮ್ಮೇಳನದ ಯಶಸ್ವಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಮ್ಮೇಳನ ಸಮಿತಿ ಮುಖಂಡ ನಾಗರಾಜ ಲಕ್ಕುಂಡಿ ತಿಳಿಸಿದರು.ಗುರುವಾರ ಶಿಕ್ಷಕರ ಭವನದಲ್ಲಿ ಹಿಂದೂ ಸಮ್ಮೇಳನದ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದೂ ಸಮಾಜೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ- ಭೇದ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ ಯುವಕರಲ್ಲಿ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು ಎಂದರು.ಶೋಭಾಯಾತ್ರೆ ಕಾರ್ಯಕ್ರಮವು ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದು, ಕಾರ್ಯಕ್ರಮಕ್ಕೆ ಬರುವಂತೆ ಎಲ್ಲ ಹಿಂದೂಗಳಿಗೆ ಮನವಿ ಮಾಡಿದರು. ಇದೊಂದು ರಾಜಕೀಯೇತರ ಹಾಗೂ ಪಕ್ಷಾತೀತ ಕೆಲಸವಾಗಿದ್ದು, ರಾಷ್ಟ್ರ ರಕ್ಷಣೆಯ ಹಿನ್ನೆಲೆ ಈ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದರು.ಸಂಘಟನೆ ಕಾರ್ಯದರ್ಶಿ ನಟರಾಜ ರಾನಡೆ ಮಾತನಾಡಿ, ಜ. ೩೧ರಂದು ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆಯು ಪ್ರಮುಖ ವೃತ್ತಗಳಲ್ಲಿ ಸಂಚರಿಸಲಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಸಿರು ತೋರಣಗಳಿಂದ, ರಂಗೋಲಿಯಿಂದ ರಸ್ತೆಯನ್ನು ಅಲಂಕೃತಗೊಳಿಸಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿವಿಧ ಕಲಾತಂಡಗಳು ಸಹ ಭಾಗವಹಿಸಲಿವೆ ಎಂದರು.ಸಂಜೆ ೫ ಗಂಟೆಗೆ ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಸಾನ್ನಿಧ್ಯವನ್ನು ಸೊರಟೂರಿನ ಶಿವಯೋಗೇಶ್ವರ ಸ್ವಾಮೀಜಿ, ನೇತೃತ್ವವನ್ನು ವರವಿಯ ಮೌನೇಶ್ವರ ಸ್ವಾಮೀಜಿ ಹಾಗೂ ಮುಖ್ಯ ಭಾಷಣವನ್ನು ವಿಹಿಂಪ ಕರ್ನಾಟಕ ಉತ್ತರ ಪ್ರಾಂತ್ಯದ ಉಪಾಧ್ಯಕ್ಷ ಗೋವರ್ಧನರಾವ್ ಮಾಡಲಿದ್ದಾರೆ ಎಂದರು. ಸಮಿತಿಯ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಮಾತನಾಡಿ, ಸಂಘ ಶತಾಬ್ದಿಯ ಸವಿನೆನಪಿನಲ್ಲಿ ನಡೆಯುವಂತಹ ಸಮ್ಮೇಳನದ ಯಶಸ್ವಿಗೆ ಈಗಾಗಲೇ ಎಲ್ಲ ಸಮಾಜದ ಮುಖಂಡರನ್ನು ಸಂಪರ್ಕಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ರಾಮಣ್ಣ ಕಮ್ಮಾರ, ಪ್ರವೀಣ ಜೈನ್, ಫಕ್ಕೀರೇಶ ರಟ್ಟಿಹಳ್ಳಿ, ಮಹಾದೇವಪ್ಪ ಹಡಪದ, ನೀಲಪ್ಪ ಚಕ್ರಸಾಲಿ, ಪುತಳಾಬಾಯಿ ಪರಬತ, ಮಾರುತಿ ಓಂಕಾರಿ, ಶ್ರೀನಿವಾಸ ಬಾರಬಾರ, ಯಲ್ಲಪ್ಪ ಇಂಗಳಗಿ ಮುಂತಾದವರು ಉಪಸ್ಥಿತರಿದ್ದರು.