ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ಅಂಜುಮನ್‌ನಿಂದ ಮನವಿ

KannadaprabhaNewsNetwork | Published : Apr 24, 2025 11:47 PM

ಸಾರಾಂಶ

ಕಾಶ್ಮೀರದ ಪ್ರವಾಸಿ ತಾಣದಲ್ಲಿ ಉಗ್ರಗಾಮಿಗಳು ಪ್ರವಾಸಿಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದು ತಪ್ಪು. ಸರ್ವ ಧರ್ಮಿಯರನ್ನು ಹೊಂದಿರುವ, ಶಾಂತಿ, ಸೌಹಾರ್ದತೆಯಿಂದ ಬಾಳುವ ಭಾರತದಲ್ಲಿ ಹೀನ ಕೃತ್ಯ ಎಸಗಿರುವುದನ್ನು ಸಹಿಸಲು ಸಾಧ್ಯವಿಲ್ಲ.

ಹುಬ್ಬಳ್ಳಿ:

ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭೀಕರ, ಹ್ಯೇಯ ಪೈಶಾಚಿಕ ದಾಳಿಯನ್ನು ಖಂಡಿಸಿ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ತಹಸೀಲ್ದಾರ್‌ ಮುಖಾಂತರ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ಈ ಕುಕೃತ್ಯ ನಡೆಸಿದ ಉಗ್ರರನ್ನು ಸದೆಬಡಿಯುವಂತೆ ಹಾಗೂ ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವಂತೆ ಸಂಸ್ಥೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಅಂಜುಮನ್ ಗೌರವ ಕಾರ್ಯದರ್ಶಿ ಬಶೀರ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ ಬಂಕಾಪೂರ, ಮೌಲಾನಾ ಜಹೀರುದ್ದೀನ ಖಾಜಿ, ಮೌಲಾನಾ ನಯೀಮೋದ್ದಿನ ಅಶ್ರಫಿ, ಮುಖಂಡರಾದ ಇರ್ಶಾದ ಬಳ್ಳಾರಿ, ಆರೀಫ ಭದ್ರಾಪೂರ, ಇಲಿಯಾಸ್ ಮನಿಯಾರ, ಇಕ್ಬಾಲ್ ನವಲೂರ, ಇಮ್ರಾನ್ ಎಲಿಗಾರ, ನವೀದ್ ಮುಲ್ಲಾ, ಸಲೀಂ ಸುಂಡಕೆ, ಮಹಮೂದ್ ಕೊಳೂರ, ಅಬ್ದುಲ್ ಗನಿ, ಮುಶ್ತಾಕ ಸುಂಡಕೆ, ಹಾಜಿಅಲಿ ಹಿಂಡಸಗೇರಿ, ಶರೀಫ ಗರಗದ, ಕಟ್ಟಿಮನಿ ಬಿಲಾಲ್, ಬಾಬಾ ಧಾರವಾಡ, ಬಾಬಾ ಐನಾಪೂರ ಸೇರಿದಂತೆ ಅಂಜುಮನ್ ಸಂಸ್ಥೆಯ ಸದಸ್ಯರು ಹಾಗೂ ವಿವಿಧ ಬಡಾವಣೆಗಳ ಮುತವಲ್ಲಿಗಳು, ಜಮಾತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಅಂಜುಮನ್‌ ಸಂಸ್ಥೆ ಖಂಡನೆ

ಧಾರವಾಡ:

ಕಾಶ್ಮೀರದ ಪಹಲ್ಗಾಂವ್‌ದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಇಲ್ಲಿಯ ಅಂಜುಮನ್‌ ಇ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಗುರುವಾರ ತೀವ್ರವಾಗಿ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕಾಶ್ಮೀರದ ಪ್ರವಾಸಿ ತಾಣದಲ್ಲಿ ಉಗ್ರಗಾಮಿಗಳು ಪ್ರವಾಸಿಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದು ತಪ್ಪು. ಸರ್ವ ಧರ್ಮಿಯರನ್ನು ಹೊಂದಿರುವ, ಶಾಂತಿ, ಸೌಹಾರ್ದತೆಯಿಂದ ಬಾಳುವ ಭಾರತದಲ್ಲಿ ಹೀನ ಕೃತ್ಯ ಎಸಗಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಂದ ಅಶಾಂತಿ, ಗಲಭೆ, ಗುಂಪುಗಾರಿಕೆ, ಕೋಮುವಾದಿಗಳಿಗೆ ಪ್ರಚೋದನೆ ಮಾಡಿದಂತಾಗುತ್ತದೆ.

ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳು ಸೂಚನೆ ನೀಡಬೇಕು. ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಂಸ್ಥೆಯ ಪರವಾಗಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

Share this article