ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಹಾಗೂ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿದ ಸಮಿತಿಯ ನಿಯೋಗ ಕಾವೇರಿ ವಿಷಯವಾಗಿ ಕೇಂದ್ರ ಅಧಿವೇಶನದಲ್ಲಿ ಸಮಗ್ರವಾದ ಚರ್ಚೆ ಮಾಡುವಂತೆ ಕೋರಿದರು..
ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನಿತ್ಯ ೧ ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಸಾಧ್ಯವೂ ಇಲ್ಲ. ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪರಿಸ್ಥಿತಿಯನ್ನೇ ಅರಿಯದೆ ಅವೈಜ್ಞಾನಿಕವಾಗಿ ನೀರು ಬಿಡುಗಡೆ ಮಾಡಬೇಕೆಂಬ ಆದೇಶವನ್ನು ಹೊರಡಿಸುತ್ತಿರವ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ವಿಸ್ತೃತ ಚರ್ಚೆ ನಡೆಸಿ ನೀರು ಬಿಡುಗಡೆ ಕುರಿತು ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಒತ್ತಡ ಹೇರುವಂತೆ ತಿಳಿಸಿದರು..ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದಿದ್ದು, ಸಭೆಯಲ್ಲಿ ನೀರು ಬಿಡುಗಡೆ ಶಿಫಾರಸಿನ ವಿರುದ್ಧ ಎಲ್ಲರೂ ನಿರ್ಣಯ ಕೈಗೊಳ್ಳಬೇಕು. ವಿಧಾನಸಭೆ ಅಧಿವೇಶನದಲ್ಲೂ ಕಾವೇರಿ ವಿಷಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಸುವಂತೆ ತಮ್ಮ ಪಕ್ಷಗಳ ಶಾಸಕರಿಗೆ ಸೂಚಿಸುವಂತೆ ಒತ್ತಾಯಿಸಿದರು.
ಕಳೆದ ವರ್ಷ ಎದುರಾದ ಭೀಕರ ಬರಗಾಲದಿಂದ ಕಾವೇರಿ ಕೊಳ್ಳದ ಜನರು ತೀರಾ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನೂ ವೈಜ್ಞಾನಿಕವಾಗಿ ನೀಡಿಲ್ಲ. ನೀರಿನ ಕೊರತೆಯಿಂದ ಬೆಳೆಗಳು ಒಣಗಲು ಬಿಡಬಾರದು. ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರಗಳು ಆದೇಶ ಮಾಡುವ ಮೊದಲು ಕಾವೇರಿ ಕೊಳ್ಳದ ಜಲಾಶಯಗಳ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಆದೇಶಗಳನ್ನು ಮಾಡುವಂತೆ ಕೋರಿಕೆ ಸಲ್ಲಿಸಿದರು.ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ, ಕೆ.ಬೋರಯ್ಯ, ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಇತರರಿದ್ದರು.