ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಸ್ವಾತಂತ್ರ್ಯ ನಂತರ ರಾಜರ ಆಳ್ವಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದಾಗ ಮೈಸೂರು ಅರಸರು ಮೊದಲಿಗರಾಗಿ ತಮ್ಮ ಸಂಸ್ಥಾನ ಬಿಟ್ಟುಕೊಟ್ಟರು. ದೇಶದಲ್ಲಿ ಇಂದಿಗೂ ಅನೇಕ ರಾಜರು ತಮ್ಮ ಆಸ್ತಿಯನ್ನು ಸಾರ್ವಜನಿಕರ ಬಳಕೆಗೆ ನೀಡಿಲ್ಲ. ಮೈಸೂರು ಮಹಾರಾಜರು ತಮ್ಮ ಇಡೀ ಆಸ್ತಿಯನ್ನು ಸಾರ್ವಜನಿಕರ ಬಳಕೆಗೆ ನೀಡಿದ್ದಾರೆ. ಹೀಗಾಗಿ ಮೈಸೂರು ಅರಸರ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಮೈಸೂರು ದೊಡ್ಡಮಟ್ಟದ ಸಾಧನೆ ಮಾಡಿದೆ ಎಂದರೆ ಅದಕ್ಕೆ ಮೈಸೂರು ಮಹಾರಾಜರೇ ಕಾರಣ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಸಮಸ್ಯೆಯಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆಯಿಂದ ಕಿತ್ತು ಮತ್ತೆ ಅದನ್ನೇ ಜನರಿಗೆ ಕೊಡುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಮುಂದೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಏನಿಲ್ಲ. ಮೈಸೂರಿನ ಜನರಿಗೆ ಕೇಂದ್ರ ಸರ್ಕಾರದ ಸಾಧನೆ, ಯೋಜನೆ ತಿಳಿಸುತ್ತೇವೆ. ಮತದಾರರು ಯದುವೀರ್ ಅವರಿಗೆ ಬೆಂಬಲ ನೀಡಬೇಕು ಎಂದು ಅವರು ಕೋರಿದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರು ದಲಿತರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಹೀಗಿದ್ದರೂ ಮಾಜಿ ಮೇಯರ್ ನಾರಾಯಣ್ ಅವರು ಪೌರಕಾರ್ಮಿಕರು ಕಾಂಗ್ರೆಸ್ ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಕಾಂಗ್ರೆಸ್ ಬೆಂಬಲಿಸಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ರಾಜೇಶ್ವರಿ, ಭಾಗ್ಯವತಿ ಇದ್ದರು.