ರಾಣಿಬೆನ್ನೂರಿನ ರಸ್ತೆ ಗುಂಡಿ ಮುಚ್ಚಲು ಮನವಿ

KannadaprabhaNewsNetwork |  
Published : Jul 26, 2025, 01:30 AM IST
ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್2ರಾಣಿಬೆನ್ನೂರು ನಗರದಲ್ಲಿನ ತೆಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ನಗರದ ಕುರುಬಗೇರಿ ಕ್ರಾಸ್‌ನಿಂದ ಸೊಪ್ಪಿನಪೇಟೆ ಮಾರ್ಗವಾಗಿ ಹಾದುಹೋಗುವ ಬೆನಕನಕೊಂಡ ಬೈಪಾಸ್ ಹಾಗೂ ಹಲಗೇರಿ ಬೈಪಾಸ್‌ವರೆಗೆ ತುಂಬಾ ಹಾಳಾಗಿರುವ ಡಾಂಬರ್ ರಸ್ತೆಯನ್ನು ತೆಗೆದು ಕಾಂಕ್ರೀಟ್ ರಸ್ತೆಯನ್ನು ಮಾಡಬೇಕು.

ರಾಣಿಬೆನ್ನೂರು: ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಶುಕ್ರವಾರ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು. ರಾಣಿಬೆನ್ನೂರು ಜಿಲ್ಲೆಯ ಪ್ರಮುಖ ನಗರವಾಗಿದೆ. ವಿವಿಧ ಧಾರ್ಮಿಕ ಕೇಂದ್ರಗಳಿಗೆ ತೆರಳಲು ಮಧ್ಯವರ್ತಿ ಸ್ಥಳವಾಗಿದ್ದರೂ ಇಲ್ಲಿನ ರಸ್ತೆಗಳ ಸ್ಥಿತಿಗತಿ ಮಾತ್ರ ಅಯೋಮಯವಾಗಿದೆ.

ನಗರದ ಕುರುಬಗೇರಿ ಕ್ರಾಸ್‌ನಿಂದ ಸೊಪ್ಪಿನಪೇಟೆ ಮಾರ್ಗವಾಗಿ ಹಾದುಹೋಗುವ ಬೆನಕನಕೊಂಡ ಬೈಪಾಸ್ ಹಾಗೂ ಹಲಗೇರಿ ಬೈಪಾಸ್‌ವರೆಗೆ ತುಂಬಾ ಹಾಳಾಗಿರುವ ಡಾಂಬರ್ ರಸ್ತೆಯನ್ನು ತೆಗೆದು ಕಾಂಕ್ರೀಟ್ ರಸ್ತೆಯನ್ನು ಮಾಡಬೇಕು. ಹಳೆಯ ತರಕಾರಿ ಮಾರುಕಟ್ಟೆ ಕೆಸರಿನ ಗದ್ದೆಯಾಗಿದ್ದು ಅಲ್ಲಿನ ಸಾರ್ವಜನಿಕರು ದಿನನಿತ್ಯ ಸಾಕಷ್ಟು ನರಕಯಾತನೆ ಅನುಭವಿಸುತ್ತಿದ್ದಾರೆ.

ಇದಲ್ಲದೆ ವಿವಿಧ ವಾರ್ಡುಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ಜನರು ಅನಾರೋಗ್ಯದಿಂದ ಬಳಲುತ್ತಿದ್ದು, ಹಿರಿಯ ನಾಗರಿಕರು ರಸ್ತೆ ಮಾರ್ಗವಾಗಿ ಹೋಗುತ್ತಿರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ಗುಂಡಿಗಳಿಂದ ನೀರು ತುಂಬಿದ್ದಲ್ಲಿ ಎಷ್ಟೋ ಜನರು ಬಿದ್ದು ಕೈ ಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ.

ಆದ್ದರಿಂದ ನಗರಸಭೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಒಂದು ವಾರದೊಳಗೆ ತಾವು ಕ್ರಮ ಕೈಗೊಳ್ಳದೆ ಹೋದಲ್ಲಿ ಪ್ರಜ್ಞಾವಂತ ನಾಗರಿಕರಿಂದ ತಮ್ಮ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಸದೃಢ ಕರ್ನಾಟಕ ನಿರ್ಮಾಣ ವೇದಿಕೆಯ ಮಂಜುನಾಥ ಗುಡ್ಡಣ್ಣನವರ, ರಾಜೇಶ ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಮಂಜುನಾಥ ಸಂಭೋಜಿ, ಮಾಲತೇಶ ಮಡಿವಾಳರ, ಶೈಲಕ್ಕ ಹರನಗಿರಿ, ಯಲ್ಲಪ್ಪ ಚಿಕ್ಕಣ್ಣನವರ, ನಿಂಗಪ್ಪ ಜಾಲಗಾರ, ಸಿದ್ದಪ್ಪ ದೇವರಗುಡ್ಡ, ಚಂದ್ರಶೇಖರ ಐರಣಿ ಮತ್ತಿತರರಿದ್ದರು.

ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಹಾವೇರಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಅರ್ಹ ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ನಾಲ್ಕು ವರ್ಷಗಳ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ ಆದಾಯ ₹3.50 ಲಕ್ಷ ಮೀರಿರಬಾರದು. ಪ್ರತಿ ತಿಂಗಳು ₹5 ಸಾವಿರ ಶಿಷ್ಯವೇತನ ಮಂಜೂರು ಮಾಡಲಾಗುವುದು.

ಭರ್ತಿ ಮಾಡಿದ ಅರ್ಜಿಯನ್ನು ಆ. 8ರೊಳಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಮೌಲಾನಾ ಆಜಾದ ಭವನ, ಶಿವಾಜಿ ನಗರ, 3ನೇ ಕ್ರಾಸ್ ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08375- 234505 ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್