ದಾ-ಹ ಅಭಿವೃದ್ಧಿಗೆ ₹1226 ಕೋಟಿಗಾಗಿ ಸಿಎಂಗೆ ಮನವಿ

KannadaprabhaNewsNetwork | Updated : Oct 30 2024, 12:34 AM IST

ಸಾರಾಂಶ

ದಾವಣಗೆರೆ-ಹರಿಹರ ಅ‍ವಳಿ ನಗರಗಳನ್ನು ಸುಂದರ, ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ₹1226.00 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ದೂಡಾ ಅಧ್ಯಕ್ಷರು, ಸದಸ್ಯರು, ಪಾಲಿಕೆ ಮೇಯರ್‌, ಉಪ ಮೇಯರ್‌, ಸದಸ್ಯರ ನಿಯೋಗ ಮಂಗಳವಾರ ಸಂಜೆ ಮನವಿ ಅರ್ಪಿಸಿದೆ.

- ಸಚಿವ ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಿದ್ದರಾಮಯ್ಯ ಬಳಿಗೆ ನಿಯೋಗ । ದೂಡಾ ಅಧ್ಯಕ್ಷ, ಮೇಯರ್‌, ಸದಸ್ಯರು ಭಾಗಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ-ಹರಿಹರ ಅ‍ವಳಿ ನಗರಗಳನ್ನು ಸುಂದರ, ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ₹1226.00 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ದೂಡಾ ಅಧ್ಯಕ್ಷರು, ಸದಸ್ಯರು, ಪಾಲಿಕೆ ಮೇಯರ್‌, ಉಪ ಮೇಯರ್‌, ಸದಸ್ಯರ ನಿಯೋಗ ಮಂಗಳವಾರ ಸಂಜೆ ಮನವಿ ಅರ್ಪಿಸಿದೆ.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗವು ದಾವಣಗೆರೆ ಮಹಾಯೋಜನೆ ನಕ್ಷೆಯಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಿತು.

ಬೇತೂರು ಗ್ರಾಮದಿಂದ ಬಾಡಾ ಕ್ರಾಸ್‌ವರೆಗೆ 36 ಮೀಟರ್ ವರ್ತುಲ ರಸ್ತೆ ಅಭಿವೃದ್ಧಿಗೆ ₹300 ಕೋಟಿ, ದೊಡ್ಡ ಬೂದಿಹಾಳ್‌ನಿಂದ ಯರಗುಂಟೆ, ದೊಡ್ಡಬಾತಿ, ಕುಂದುವಾಡ ಗ್ರಾಮಗಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿವರೆಗೆ ವರ್ತುಲ ರಸ್ತೆಗೆ ₹200 ಕೋಟಿ, ದಾವಣಗೆರೆ ಅಶೋಕ ಟಾಕೀಸ್‌ನಿಂದ ಈರುಳ್ಳಿ ಮಾರುಕಟ್ಟೆವರೆಗೆ ರೈಲ್ವೆ ಹಳಿಗಳಿಗೆ ಸಮನಾಂತರ ಸೇವಾ ರಸ್ತೆಯ ನಿರ್ಮಾಣಕ್ಕೆ ₹35 ಕೋಟಿ, ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ₹25 ಕೋಟಿ ಬಿಡುಗಡೆಗೆ ಆಗ್ರಹಿಸಲಾಯಿತು.

ನಗರದ ರೈಲ್ವೆ ಸ್ಟೇಷನ್, ಖಾಸಗಿ ಬಸ್‌ ನಿಲ್ದಾಣ, ಅಶೋಕ ಟಾಕೀಸ್ ಮುಂಭಾಗ ಸ್ಕೈ ವಾಕ್‌ ನಿರ್ಮಿಸಲು ₹3 ಕೋಟಿ, ದಾವಣಗೆರೆ, ಹರಿಹರದಲ್ಲಿ ಸರ್ಕಾರಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ₹50 ಕೋಟಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಭಾಂಗಣಕ್ಕೆ ₹15 ಕೋಟಿ, ಹರಿಹರದ ಕೇಶವ ನಗರ, ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಮಹಾ ಯೋಜನೆಯಲ್ಲಿ ಕಾಯ್ದಿರಿಸಿದ ಟ್ರಕ್ ಟರ್ಮಿನಲ್ ಅಭಿವೃದ್ಧಿಗೆ ₹25 ಕೋಟಿ, ಸುಸಜ್ಜಿತ ಒಂದು ಮ್ಯೂಜಿಯಂ ನಿರ್ಮಿಸಲು ₹10 ಕೋಟಿ, ನಗರ ವಾಹನ ದಟ್ಟಣೆ ಮುಕ್ತವಾಗಿಸಲು ಪಿ.ಬಿ. ರಸ್ತೆಯಿಂದ ಹದಡಿ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ಮೇಲ್ತೇತುವೆ ನಿರ್ಮಾಣಕ್ಕೆ ₹500 ಕೋಟಿ ನೀಡುವಂತೆ ಮನವಿ ಮಾಡಲಾಯಿತು.

ಟಿವಿ ಸ್ಟೇಷನ್ ಕೆರೆ ಪ್ರವಾಸಿಗರನ್ನು ಆಕರ್ಷಿಸಲು, ಅದರ ಸೌಂದರ್ಯೀಕರಣ, ವಾಟರ್ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸಲು ₹5 ಕೋಟಿ, ದಾವಣಗೆರೆ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹20 ಕೋಟಿ, ಬಾತಿ ಗುಡ್ಡದಿಂದ ಕುಂದುವಾಡ ಕೆರೆವರೆಗೆ ರೋಪ್‌ವೇ, ಬಾತಿ ಗುಡ್ಡದಲ್ಲಿ 150 ಅಡಿ ಎತ್ತರದ ದಾವಣಗೆರೆಗೆ ಅಭಿಮುಖವಾಗಿ ಆಂಜನೇಯ ಮೂರ್ತಿ/ ಬಸವಣ್ಣನವರ ಮೂರ್ತಿ ನಿರ್ಮಾಣಕ್ಕೆ ₹2 ಕೋಟಿ, ಜವಾಹರ್‌ಲಾಲ್ ನೆಹರೂ ತಾರಾಲಯ ಮಾದರಿಯಲ್ಲಿ ದಾವಣಗೆರೆಯಲ್ಲಿ ''''''''ತಾರಾಲಯ'''''''' ನಿರ್ಮಾಣಕ್ಕೆ ₹10 ಕೋಟಿ, ದಾವಣಗೆರೆ- ಹರಿಹರದಲ್ಲಿ 70:30 ಅನುಪಾತದ ಜಂಟಿ ಉದ್ಯಮದಲ್ಲಿ 500 ಎಕರೆಯಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಕೋರಲಾಯಿತು.

ದೂಡಾ ಸದಸ್ಯರಾದ ಎಂ.ಮಂಜುನಾಥ ತಕ್ಕಡಿ, ಎಂ.ಆರ್. ವಾಣಿ ಬಕ್ಕೇಶ, ಜಬ್ಬಾರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ಲತೀಫ್‌, ಉದಯಕುಮಾರ, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ಬಿ.ರಹೀಂ ಸಾಬ್‌, ಬಿ.ಎಚ್.ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ, ಎಲ್.ಡಿ.ಗೋಣೆಪ್ಪ, ಎಲ್.ಎಂ.ಎಚ್. ಸಾಗರ್, ಸವಿತಾ ಗಣೇಶ ಹುಲ್ಮನಿ, ಕಾಂಗ್ರೆಸ್ ಮುಖಂಡರಾದ ನ್ಯಾಮತಿ ಬಕ್ಕೇಶ, ಗಣೇಶ ಹುಲ್ಮನಿ, ನರೇಂದ್ರ, ಗಾಂಧಿ ನಗರ ರಮೇಶ ಇತರರು ಇದ್ದರು.

- - -

ಬಾಕ್ಸ್‌ * ರಂಗ ಮಂದಿರ, ರಾಕ್‌ ಗಾರ್ಡನ್‌ ಮಾದರಿ ನಿರ್ಮಾಣ ರವೀಂದ್ರ ಕಲಾಕ್ಷೇತ್ರ, ಬಯಲು ರಂಗ ಮಂದಿರ, ಗ್ರೀಕ್ ಮಾದರಿಯಂತೆ ದಾವಣಗೆರೆಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ₹10 ಕೋಟಿ, ಹರಿಹರದಲ್ಲಿ ಒಂದು ಟೌನ್ ಹಾಲ್ ನಿರ್ಮಾಣಕ್ಕೆ ₹5 ಕೋಟಿ, ದಾವಣಗೆರೆಯಲ್ಲಿ ರಾಕ್ ಗಾರ್ಡನ್ ಮಾದರಿ ನಿರ್ಮಾಣಕ್ಕೆ ₹30 ಕೋಟಿ ಸೇರಿದಂತೆ ಒಟ್ಟು ₹1226.00 ಕೋಟಿ ಅನುದಾನ ಬಿಡುಗಡೆ ಮಾಡಿ, ದಾವಣಗೆರೆ-ಹರಿಹರ ಅವಳಿ ನಗರಗಳ ಅಭಿವೃದ್ಧಿಗೆ ಸ್ಪಂದಿಸುವಂತೆ ಸಿಎಂಗೆ ಮನವಿ ಮಾಡಲಾಯಿತು.

- - - -29ಕೆಡಿವಿಜಿ8:

ದಾವಣಗೆರೆ-ಹರಿಹರ ಅಭಿವೃದ್ಧಿಗೆ ₹1226 ಕೋಟಿ ಅನುದಾನ ನೀಡುವಂತೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ದೂಡಾ ಅಧ್ಯಕ್ಷರು, ಮೇಯರ್‌, ಸದಸ್ಯರು, ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು.

Share this article