ಕನ್ನಡಪ್ರಭ ವಾರ್ತೆ ತುಮಕೂರು
ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನಲ್ಲಿ ಸಹಕಾರ ಕ್ಷೇತ್ರದ ದಿಗ್ಗಜ್ಜ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಚಿವ ಸತೀಶ ಜಾರಕಿಹೋಳಿ ನೇತೃತ್ವದಲ್ಲಿ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ,ಡಿಸಿಸಿ ಬ್ಯಾಂಕ್ ನಿರ್ದೇಶಕ, ತುಮುಲ್ ಅಧ್ಯಕ್ಷ ವಿ.ವೆಂಕಟೇಶ್ ತಿಳಿಸಿದ್ದಾರೆ.ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಹಕಾರ ಯೂನಿಯನ್ ತುಮಕೂರು, ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಡಿಸಿಸಿ ಬ್ಯಾಂಕ್ ತುಮಕೂರು ಇವರು ವತಿಯಿಂದ ಆಯೋಜಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ತುಮಕೂರು ಜಿಲ್ಲೆಯಲ್ಲದೆ, ರಾಜ್ಯದಲ್ಲಿಯೇ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶ್ರಮವಹಿಸಿದ್ದಾರೆ. ಹಾಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಕೆ.ಎನ್.ರಾಜಣ್ಣ ಅವರನ್ನು ಸಚಿವರಾಗಿ ನೇಮಕ ಮಾಡಬೇಕೆಂಬುದು ನಮ್ಮಂತಹ ಅನೇಕ ಶಾಸಕರ ಒತ್ತಾಯವಾಗಿದೆ ಎಂದರು.
ಸಹಕಾರ ಕ್ಷೇತ್ರದ ಎಬಿಸಿಡಿ ಗೊತ್ತಿಲ್ಲದ ನನಗೆ ತುಮುಲ್ ಅಧ್ಯಕ್ಷರನ್ನಾಗಿ ಮಾಡಿದಲ್ಲದೆ, ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿಯೂ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅವರ ಹೆಸರಿಗೆ ಚ್ಯುತಿ ಬರದಂತೆ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ. ಅವರ ಶಿಷ್ಯನಾಗಿ ರಾಜಕೀಯ ಮಾಡಲಿದ್ದೇನೆ. ಸಕಲರಿಗೂ ಲೇಸನ್ನೇ ಬಯಸುವ ಕೆ.ಎನ್.ರಾಜಣ್ಣನವರು ಸಚಿವರಾಗಿ ಮುಂದುವರೆದರೆ ನಮ್ಮಂತಹ ಅನೇಕರಿಗೆ ನೆರಳಾಗಿರುತ್ತಾರೆ ಎಂದು ತಿಳಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ರಾಜಕಾರಣಿಗಿಂತ,ಸಹಕಾರಿ ಧುರೀಣರಾಗಿ ಜನರಿಗೆ ಹೆಚ್ಚಿನ ಸಹಕಾರ ಮಾಡಬಹುದು ಎಂಬುದಕ್ಕೆ ನಮ್ಮಲ್ಲರ ನಾಯಕರಾದ ಕೆ.ಎನ್.ರಾಜಣ್ಣನವರೇ ಸಾಕ್ಷಿ. ನಾನು ಸಹ ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಪಡೆದು, ಸಿಐಟಿ ಸಂಸ್ಥೆಯನ್ನು ಕಟ್ಟಿದೆ. 13 ಸಾವಿರಕ್ಕೂ ಹೆಚ್ಚು ಜನರು ಅಲ್ಲಿಂದ ಡಿಗ್ರಿ ಪಡೆದು ಹೊರ ಹೋಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಹಕಾರಿ ಸಚಿವ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ, ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರಿ ಕ್ಷೇತ್ರದಿಂದ ಸಹಾಯ ಮಾಡಲು ಸಾಧ್ಯ. ಕೃಷಿಗೆ ಹೈನುಗಾರಿಕೆ,ರೇಷ್ಮೆ ಕೃಷಿ ಪ್ರಮುಖ ಉಪ ಕಸುಬುಗಳಾಗಿವೆ. ಕೃಷಿ ಬಂಡವಾಳ ಹೆಚ್ಚಾಗುತ್ತಿರುವ ಕಾರಣ,ರೈತ ಅರ್ಥಿಕವಾಗಿ ಇನ್ನೂ ಸದೃಢನಾಗಿಲ್ಲ. ಎಲ್ಲಿಯವರೆಗೆ ರೈತರಿಗೆ ತಾನು ಉತ್ಪಾದಿಸಿದ ವಸ್ತುವಿಗೆ ತಾನೇ ಬೆಲೆ ನಿಗದಿ ಮಾಡುವಂತಹ ಸ್ವಾತಂತ್ರ ಲಭಿಸುತ್ತದೆಯೋ, ಆಗ ರೈತ ಅರ್ಥಿಕವಾಗಿ ಮೇಲೆ ಬರಲು ಸಾಧ್ಯ. ಇಂತಹ ವ್ಯವಸ್ಥೆ ಜಾರಿಗೆ ತರುವ ಕೆಲಸ ಆಗಬೇಕೆಂದರು.ಸಾಲ ಮನ್ನಾದಂತಹ ಯೋಜನೆಗಳಿಂದ ಸಾಲ ಮರುಪಾವತಿ ವ್ಯವಸ್ಥೆಯೇ ಹಾಳಾಗಲಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದ ಐವತ್ತು ಸಾವಿರ ರು. ಸಾಲದ ಸುಮಾರು 232 ಕೋಟಿ ರು ಇನ್ನು ಬಾಕಿ ಬರಬೇಕಿದೆ. ನಾನು ಸಚಿವನಾಗಿದ್ದರೆ ಅದನ್ನು ಬಿಡುಗಡೆಗೊಳಿಸಲು ವ್ಯವಸ್ಥೆ ಮಾಡುತ್ತಿದ್ದೆ.
ಸಂವಿಧಾನದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಾವು ಮಾಡಬೇಕಾದ ಕೆಲಸ ಬಿಟ್ಟು, ಉಳಿದಿದ್ದನ್ನು ಮಾಡುತ್ತಿವೆ. ಈ ಹಿಂದೆ ಋಣಮುಕ್ತ ಯೋಜನೆಯಡಿ ಸುಮಾರು 44 ಕೋಟಿ ರುಗಳ ಸಾಲ ಮನ್ನಾ ಮಾಡಲಾಗಿತ್ತು. ಈ ಬಾರಿಯೂ ಸಾವನ್ನಪ್ಪಿದ ಕುಟುಂಬದ 25 ಸಾವಿರ ಸಾಲ ಮನ್ನಾ ಮಾಡಲು ಡಿಸಿಸಿ ಬ್ಯಾಂಕ್ ನಿರ್ಧರಿಸಿದೆ. ಈ ವರ್ಷದ ಡಿಸೆಂಬರ್ ಅಂತ್ಯದವರೆಗೂ ಅರ್ಜಿ ಸಲ್ಲಿಸಬಹುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.ಇದೇ ವೇಳೆ 2025ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪಡೆದ ಟಿ.ಕೆ.ನಂಜುಂಡಪ್ಪ, ಡಿ.ನಾಗರಾಜಯ್ಯ, ಕೆ.ಎ.ದೇವರಾಜು, ಕೆ.ಎನ್.ಗೋವಿಂದರಾಜು, ಎಂ.ಎಸ್.ವಿಶ್ವನಾಥ್, ಕೆ.ಜಿ.ಜಗದೀಶ್ ಮತ್ತು ಎಚ್.ಆರ್.ರೇವಣ್ಣ ಅವರನ್ನು ಅಭಿನಂದಿಸಲಾಯಿತು. ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ..ವೆಂಕಟೇಗೌಡ, ಡಿಸಿಸಿ ಬ್ಯಾಂಕ್ ಹಿರಿಯ ಸಲಹೆಗಾರರಾದ ಜಿ.ಎಸ್.ರಮಣರೆಡ್ಡಿ, ಸಹಕಾರ ಮಹಾಮಂಡಲದ ಎಂ.ಡಿ. ಕೆ.ಎಸ್.ನವೀನ್, ಡಿಸಿಸಿ ಸಿಇಓ ಜಂಗಮಪ್ಪ ಮತ್ತಿತರರು ಉಪಸ್ಥಿತರಿದ್ದರು.