ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಲಾಯಿತು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ರೈತರ ಸಾಲಮನ್ನಾ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಾಲಮನ್ನಾ ಮಾಡಬೇಕು. ಕಬ್ಬಿನ ಎಫ್‌ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಈಗಾಗಲೇ ಕಬ್ಬು ಕಟಾವು ಸಾಗಣಿಕೆ ದರ ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು.೨೦೨೨-೨೩ರ ಸಾಲಿನಲ್ಲಿ ಟನ್ ಕಬ್ಬಿಗೆ ರು. ೧೫೦ ಹೆಚ್ಚುವರಿ ದರ ಕೂಡಲೇ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ಕಾರವೇ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಲು ಫೆ. ೬ ರಂದು ಬೆಂಗಳೂರು ಚಲೋ ನಡೆಸಲಾಗುವುದು. ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರವೇ ವಿಮಾ ಕಂತು ಪಾವತಿಸಿ 5 ಲಕ್ಷ ಜೀವವಿಮೆ ಪಾಲಿಸಿ ನೀಡಲಾಗಿದೆ. ಆಕಸ್ಮಿಕ ಅಘಘಾತ, ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ೫ ಲಕ್ಷ ರು .ಪರಿಹಾರ ಸಿಗುತ್ತದೆ. ಅದನ್ನು ರಾಜ್ಯದಲ್ಲಿ ಜಾರಿಗೆ ತರಬೇಕು.ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪಂಜಾಬ್, ಹರಿಯಾಣ, ತೆಲಂಗಾಣ, ಹಾಗೂ ತಮಿಳುನಾಡು ಮಾದರಿಯಲ್ಲಿ ರಾಜ್ಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂ.ಎಸ್‌ಪಿ ಖರೀದಿ ಕೇಂದ್ರ ತೆರೆದು ರೈತರಿಂದ ಖರೀದಿಸುವ ಮಿತಿಯನ್ನು ರದ್ದುಗೊಳಿಸಿ ಮೇಲಿನ ರಾಜ್ಯಗಳಲ್ಲಿ ಇರುವಂತೆ ಜಾರಿ ಮಾಡಬೇಕು. ಬರಗಾಲ ಪೀಡಿತ ಪ್ರದೇಶದ ರೈತರಿಗೆ ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಅಚ್ಚುಕಟ್ಟು ರೈತರಿಗೆ ವಂಚನೆ ಮಾಡಿರುವ ಸರ್ಕಾರ ಕೂಡಲೇ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರ ಸೇರಿದಂತೆ ಇನ್ನು ಹತ್ತಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ರೈತರು ಒತ್ತಾಯಿಸಿದ್ದಾರೆ. ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಕಿರಗಸೂರು ಶಂಕರ್ ಮಹಿಳಾ ಅಧ್ಯಕ್ಷರು ಕಮಲಮ್ಮ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್, ತಾಲೂಕು ಅಧ್ಯಕ್ಷ ಸತೀಶ್, ತಾಲೂಕು ಉಪಾದ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ಷಡಕ್ಷರಿಸ್ವಾಮಿ, ತಾಲೂಕು ಕಾರ್ಯದರ್ಶಿ ಸುಂದ್ರಪ್ಪ, ದೊಡ್ಡಿಂದುವಾಡಿ ಮಹೇಶ್, ಇನಾಯತ್, ಡಿ.ಸಿ.ಮಲ್ಲೇಶ್, ವಿಜಯಕುಮಾರ್, ಸಿದ್ದರಾಜು, ದಯನಂದ, ನವೀನ್, ಮಹದೇವಸ್ವಾಮಿ, ವಿಜೇಂದ್ರ, ಡಿ.ಪಿ.ಮಹದೆವಸ್ವಾಮಿ ಉಡಿಗಾಲ ಗುರು ಅಂಬಳೆ ಮಂಜುನಾಥ್ ಮತ್ತಿತರರಿದ್ದರು.