ಕನ್ನಡಪ್ರಭ ವಾರ್ತೆ ರಾಮನಾಥಪುರ
ಜಿಲ್ಲಾಧಿಕಾರಿಗಳು ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ನೀಡಿ ಮಾತನಾಡಿ, ಇಂತಹ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರವು ಸಂಗೀತ, ಸಾಹಿತ್ಯ, ಸಾಂಸ್ಕೃತಿಕವಾಗಿ ಯಾತ್ರಾ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಪ್ರತಿನಿತ್ಯ ಸಹಸ್ರಾರು ಭಕ್ತರು ಇಲ್ಲಿಗೆ ಅಗಮಿಸುತ್ತಾರೆ. ಕಾವೇರಿ ನದಿ ಮಾತೆಯೂ ಇಲ್ಲಿ ಹರಿದು ಕ್ಷೇತ್ರದ ಮಹಿಮೆಯನ್ನು ಇಮ್ಮಡಿಗೊಳಿಸಿ. ಇಲ್ಲಿನ ಹತ್ತಾರು ದೇವಾಲಯಗಳು ಭಕ್ತರ ಶ್ರದ್ಧಾ ಕೇಂದ್ರಗಳಾಗಿವೆ.
ವಿಷಾದದ ಸಂಗತಿ ಎಂದರೆ ಕಾವೇರಿ ನದಿಯು ದಿನೇದಿನೇ ಮಲಿನವಾಗುತ್ತಿದ್ದು, ನದಿ ಪಾತ್ರದಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ರಾಮನಾಥಪುರಕ್ಕೆ ಹೊರಗಡೆಯಿಂದ ಬರುವ ಕೆಲವು ಪುರೋಹಿತರು ಮತ್ತು ಭಕ್ತರು ನದಿಯ ಒಳಾಂಗಣದಲ್ಲಿ ಹೋಮ ಹವನಾದಿಗಳನ್ನು ಮಾಡುವುದು, ಸ್ನಾನ ಮಾಡಿ ತೊಟ್ಟ ಬಟ್ಟೆಗಳು, ಪರಿಕರಗಳು, ಫೋಟೋಗಳು ಮತ್ತು ಪೂಜಾ ತ್ಯಾಜ್ಯಗಳನ್ನು ನದಿಯಲ್ಲಿಯೇ ಬಿಡುವುದು ವಾಡಿಕೆಯಾಗಿದೆ. ನದಿಯಲ್ಲಿ ರಾಶಿ-ರಾಶಿ ಬಟ್ಟೆಗಳು ಕೊಳೆತು ನಾರುತ್ತಿರುವುದರ ಜೊತೆಗೆ ನದಿಯಲ್ಲಿಯೇ ಕೆಲವರು ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ವಾಸನೆಯಿಂದ ನದಿಗೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ವರ್ಷವಿಡೀ ಬೇರೆ ಬೇರೆ ಊರುಗಳಿಂದ ದೇವರನ್ನು ಇಲ್ಲಿಗೆ ತರುವವರು ಇಲ್ಲಿಯೇ ವಾಸ್ತವ ಮಾಡಿ ನದಿಯಲ್ಲಿ ಬಾಳೆಕಂದು ಮಾವಿನ ಸೊಪ್ಪು ಊಟದ ತಟ್ಟೆಗಳು ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬಿಸಾಡುತ್ತಾರೆ. ಇದರಿಂದ ನದಿಯ ನೀರು ಕೊಳೆತು ನಾರುತ್ತಿದೆ.ಇನ್ನು ಕೆಲವರು ದೇವರುಗಳನ್ನು ತರುವವರು ಡೋಲು, ತಮಟೆ ಮುಂತಾದ ವಾದ್ಯಗಳನ್ನು ಮಧ್ಯ ರಾತ್ರಿ ವೇಳೆಯಲ್ಲಿ ಬಡಿದು ಶಬ್ದ ಮಾಡಿ ಇಲ್ಲಿನ ನಿವಾಸಿಗಳ ನಿದ್ರೆಗೆ ಭಂಗ ತರುವುದು ಮತ್ತು ಶಬ್ಧ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದಾರೆ. ನದಿಯ ಮಧ್ಯ ಹಾಗೂ ಅಕ್ಕಪಕ್ಕದಲ್ಲಿ ಮರಗಿಡಗಳು ಬೆಳೆದು ಹಾಗೂ ಉತ್ತಮ ಶೌಚಾಲಯ ಇಲ್ಲದೆ ಶುಚಿತ್ವ ಇಲ್ಲದಾಗಿದೆ. ಆದ್ದರಿಂದ ಶೃಂಗೇರಿ, ಮುಂತಾದ ಕಡೆಗೆ ಕ್ಷೇತ್ರಗಳಲ್ಲಿ ಮಾಡಿರುವ ರೀತಿಯಲ್ಲಿ ಇಲ್ಲಿಯ ಕಾವೇರಿ ನದಿಯ ರಕ್ಷಣೆಗಾಗಿ ನದಿಗೆ ಹೋಗುವ ದಂಡೆಗೆ ಕಬ್ಬಿಣದ ಬಾಗಿಲು ಮತ್ತು ನದಿ ದಂಡೆಯಲ್ಲಿ ಗಾರ್ಡ್‌ಗಳನ್ನು ನೀಮಿಸಿದರೆ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದು ಸಮಿತಿಯವರು ಮತ್ತು ಗ್ರಾಮಸ್ಥರ ಅಭಿಪ್ರಾಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಸಿ. ಸೌಮ್ಯ, ಪಾರುಪತ್ತೇರ್ ರಮೇಶ್ ಭಟ್, ಸಿದ್ದರಾಜು ಮುಂತಾದವರು ಇದ್ದರು.
* ಹೇಳಿಕೆ:ರಾಮನಾಥಪುರ ಪುಣ್ಯ ಸ್ಥಳಕ್ಕೆ ಬರುವ ಭಕ್ತರಿಗೆ ಮೂಲ ಸೌಲಭ್ಯಗಳು ಮತ್ತು ಕಾವೇರಿ ನದಿ ಸ್ವಚ್ಛತೆ ಬಗ್ಗೆ ಕ್ರಮ ಹಾಗೂ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಈ ಸಂಬಂಧ ಕೂಡಲೇ ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ರಾಮನಾಥಪುರದ ದೇವಾಲಯಕ್ಕೆ ಕರೆಸಿ ಚರ್ಚಿಸಿ ಉತ್ತಮ ರೀತಿಯಲ್ಲಿ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು.- ಲತಾಕುಮಾರಿ, ಜಿಲ್ಲಾಧಿಕಾರಿ