ಭಾಲ್ಕಿಯಲ್ಲಿ ಸಂಸದ ಸಾಗರ ಖಂಡ್ರೆ ಅವರಿಗೆ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಸೇವೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯಗೊಳಿಸುವ ಸಂಬಂಧ ಉಂಟಾಗಿರುವ ಗೊಂದಲ ನಿವಾರಿಸಿ, ಸೇವಾನಿರತ ಶಿಕ್ಷಕರ ಸೇವಾ ಹಕ್ಕುಗಳು ಹಾಗೂ ಉದ್ಯೋಗ ಭದ್ರತೆಯನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವು ಸಂಸದರಾದ ಸಾಗರ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.
ಈ ಕುರಿತು ಸಲ್ಲಿಸಿದ ಮನವಿಯಲ್ಲಿ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಹಾಗೂ ಟಿಇಟಿ ಮಾರ್ಗಸೂಚಿಗಳು ಜಾರಿಯಾಗುವ ಮೊದಲು ಕಾನೂನುಬದ್ಧವಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ನಂತರದ ಅರ್ಹತಾ ಷರತ್ತುಗಳನ್ನು ಹಿಂದಿನ ದಿನಾಂಕದಿಂದ ಅನ್ವಯಿಸಬಾರದು. ಇಂತಹ ಶಿಕ್ಷಕರ ಸೇವಾ ಹಕ್ಕುಗಳು, ಉದ್ಯೋಗ ಭದ್ರತೆ, ವೇತನ, ಪಿಂಚಣಿ ಹಾಗೂ ಬಡ್ತಿ ಅವಕಾಶಗಳಿಗೆ ಯಾವುದೇ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಸೂಕ್ತ ಕಾನೂನು, ಆಡಳಿತಾತ್ಮಕ ಹಾಗೂ ನೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ಬೀದರ ನಗರದಲ್ಲಿರುವ ಶಿಕ್ಷಕರ ಗುರುಭವನ ಖಾಲಿ ಮಾಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಸಂಸದ ಸಾಗರ ಖಂಡ್ರೆ ಅವರು, ಸೇವಾನಿರತ ಶಿಕ್ಷಕರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಅಗತ್ಯಮಟ್ಟದಲ್ಲಿ ಗಮನಹರಿಸಿ, ಈ ವಿಷಯವನ್ನು ಸಂಬಂಧಿಸಿದ ಹಂತಗಳಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಡರಿ ಆಡೆ, ಜಿಲ್ಲಾ ಉಪಾಧ್ಯಕ್ಷ ಅಲ್ಲಾವುದ್ದೀನ್ ಪಟೇಲ್, ಸಮೀನಾ ಬೇಗಮ್, ಅಶೋಕ ಪಾಟೀಲ, ಶರಣಪ್ಪ ಬಿರಾದಾರ್, ಚಂದ್ರಕಾಂತ ತಳವಾಡೆ, ಲಲಿತಾ ಸೇರಿದಂತೆ ಜಿಲ್ಲಾ, ತಾಲೂಕು ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಶಿಕ್ಷಕರ ಸಂಘದ ಮುಖಂಡರು ಉಪಸ್ಥಿತರಿದ್ದರು.
--
ಚಿತ್ರ 11ಬಿಡಿಆರ್51:
ಭಾಲ್ಕಿಯಲ್ಲಿ ಸಂಸದ ಸಾಗರ ಖಂಡ್ರೆ ಅವರಿಗೆ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.