ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಬರಲು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಪಾತ್ರವಿದ್ದು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಚಿಂತನೆ ನಡೆಸಿದ ಗುಂಪಿನಲ್ಲೇ ಸಿದ್ದೇಶಣ್ಣ ಇದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ತಿಳಿಸಿದ್ದಾರೆ.
- ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಚಿಂತನೆಯ ಗುಂಪಿನಲ್ಲೇ ಸಿದ್ದೇಶಣ್ಣ ಇದ್ದಾರೆ: ಎನ್.ರವಿಕುಮಾರ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಬರಲು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಪಾತ್ರವಿದ್ದು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಚಿಂತನೆ ನಡೆಸಿದ ಗುಂಪಿನಲ್ಲೇ ಸಿದ್ದೇಶಣ್ಣ ಇದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ತಿಳಿಸಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ್ ಅವರ 74ನೇ ಜನ್ಮದಿನ ಹಾಗೂ ನಮ್ಮಭಿಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಹಳೆಯ ವೈಭವಕ್ಕೆ ಮರಳಿದರೆ ಅತೀ ಹೆಚ್ಚು ಸಂತಸಪಡುವ ವ್ಯಕ್ತಿಯೂ ಸಿದ್ದೇಶ್ವರ್ ಆಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಮುಂಚಿನಂತಾದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಖುಷಿಪಡುವುದೂ ಆಗುತ್ತದೆ. ದೇಶಾದ್ಯಂತ ಎಲ್ಲ ಕಡೆ ನವು ಅಧಿಕಾರಕ್ಕೆ ಬರುತ್ತಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಧಿಕಾರಕ್ಕೂ ಬರುತ್ತಿದ್ದೇವೆ. ಆದರೆ, ಭಾರತದ ದಕ್ಷಿಣ ಭಾಗದಲ್ಲೇ ಖಾಲಿ ಇದೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸವಾಗಲಿದೆ ಎಂದು ಅವರು ತಿಳಿಸಿದರು.
ನಾವೆಲ್ಲರೂ ಒಂದಾದರೆ ದಾವಣಗೆರೆಯಲ್ಲಿ ಬೇರೆ ಪಕ್ಷಕ್ಕೆ ಜಾಗವೇ ಇರುವುದಿಲ್ಲ. ನಾವು ಒಂದಾಗಿಲ್ಲವೆಂದು ಬೇರೆ ಪಕ್ಷದವರು ಸದ್ಯಕ್ಕೆ ಕೇಕೆ ಹಾಕುತ್ತಿದ್ದಾರೆ. ದಾವಣಗೆರೆ ಮಹಾನಗರವು ಸ್ಮಾರ್ಟ್ ಸಿಟಿ ಆಗುವಲ್ಲಿ, ನಗರ, ಜಿಲ್ಲೆ ಅಭಿವೃದ್ಧಿ ಆಗುವಲ್ಲಿ ಸಿದ್ದೇಶ್ವರ್ ಪ್ರಯತ್ನ ದೊಡ್ಡದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಬಹುದಿತ್ತು. ಆ ಧೂಳನ್ನು ಮತ್ತೆ ನಾನು ಕದಡುವ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಮ್ಮೆಲ್ಲಾ ಕಾರ್ಯಕರ್ತರು ಉತ್ತಮವಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ, ಒಂದಾಗಿದ್ದರೆ ಅದೇ ಕಾರ್ಯಕರ್ತರು ಖುಷಿಪಡುವಷ್ಟು ಬೇರೆ ಯಾರೂ ಖುಷಿಪಡುವುದಿಲ್ಲ. ಬೆಳಗ್ಗೆ ಎದ್ದರೆ ಕಾರ್ಯಕರ್ತರು ಬೇಜಾರಾಗುತ್ತಾರೆ. ರಾತ್ರಿ ಮಲಗುವಾಗಲೂ ಬೇಜಾರಿನಲ್ಲೇ ಮಲಗುತ್ತಾರೆ. ಕೆಲ ಕಾರ್ಯಕರ್ತರು ಅಅಳುತ್ತಾರೆ. ಅಂತಹ ಕಾರ್ಯಕರ್ತರಲ್ಲಿ ನಾನೂ ಸಹ ಒಬ್ಬ. ಕರ್ನಾಟಕದಲ್ಲಿ ಬಿಜೆಪಿ ಮುಂಚೆ ಚನ್ನಾಗಿ ಆಗಬೇಕು. ಹಾಗೆ ಆದಲ್ಲಿ ಮೊದಲು ಖುಷಿಪಡುವ ವ್ಯಕ್ತಿಯೂ ಸಹ ಸಿದ್ದೇಶ್ವರ ಎಂದು ಅವರು ವಿವರಿಸಿದರು.
ಬಿಜೆಪಿ ತತ್ವ, ಸಿದ್ದಾಂತರ ಅರಿತವರು ಸಿದ್ದೇಶಣ್ಣ. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಯಲ್ಲೂ ಸಿದ್ದೇಶ್ವರರ ಪಾತ್ರವಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲುವಲ್ಲಿ ಮಹತ್ವದ ಪಾತ್ರವಿದೆ. ಸಿದ್ದೇಶಣ್ಣನವರಿಗೆ ದೇವರು ಇನ್ನೂ ಆರೋಗ್ಯ, ಶಕ್ತಿಯನ್ನು ನೀಡಲಿ. ನಮ್ಮ ಪಕ್ಷದ ಸ್ಮಾರ್ಟ್ ಲೀಡರ್ ಸಿದ್ದೇಶ್ವರ್ ಅಣ್ಣನವರಿಗೆ ದೇವರು ಆಯುರಾಗೋಗ್ಯವನ್ನು ನೀಡಿ, ಪಕ್ಷಕ್ಕೆ ಮತ್ತಷ್ಟು ಬಲವಾಗಿ ಕೆಲಸ ಮಾಡುವಂತಹ ಶಕ್ತಿ ನೀಡಲಿ ಎಂದು ಎನ್.ರವಿಕುಮಾರ ಹಾರೈಸಿದರು.
ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಹಿಂದೆಲ್ಲಾ ಚುನಾವಣೆಯಲ್ಲಿ ಮಾತ್ರ ಸಂಸದರಾದವರು ಕಾಣಿಸಿಕೊಳ್ಳುತ್ತಿದ್ದರು. ಆದರೆ, ಜಿ.ಮಲ್ಲಿಕಾರ್ಜುನಪ್ಪ ಸಂಸದರಾದ ನಂತರ ಪ್ರತಿ ಹಳ್ಳಿಹಳ್ಳಿಗೂ ಓಡಾಡಿ ತಮ್ಮ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿದವರು. 1996ರಲ್ಲಿ ಜಿ.ಮಲ್ಲಿಕಾರ್ಜುನಪ್ಪ ಸಂಸದರಾದ ನಂತರ ಜಿಲ್ಲೆಯಲ್ಲಿ ಪರಿವರ್ತನೆಯಾಯಿತು. ತಂದೆ ಹಾದಿಯಲ್ಲಿ ಜಿ.ಎಂ.ಸಿದ್ದೇಶ್ವರ 4 ಅವದಿಗೆ ಸಂಸದರಾಗಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಭದ್ರಗೊಳಿಸಿದರು ಎಂದರು.
ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿಯಂತಹ ಮಹಾನ್ ನಾಯಕರ ಪಕ್ಷದಲ್ಲಿ ನಾವಿರುವುದು ಪುಣ್ಯ. ಪಕ್ಷದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಿಂದ ಕಾರ್ಯಕರ್ತರು ನೊಂದಿದ್ದಾರೆ. ಆಂತರಿಕ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಒಗ್ಗಟ್ಟಾಗಿ ಜಿಲ್ಲೆಯಲ್ಲಿ ಬಿಜೆಪಿ ಗತವೈಭವ ಮರು ಸ್ಥಾಪಿಸಬೇಕು. ಶೀಘ್ರವೇ ಪಕ್ಷದಲ್ಲೂ ಬದಲಾವಣೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
74ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು, ಕಾರ್ಯಕರ್ತರು, ಪದಾಧಿಕಾರಿಗಳು, ಹಿತೈಷಿಗಳು ಸಿದ್ದೇಶ್ವರರನ್ನು ಸನ್ಮಾನಿಸಿ, ಗೌರವಿಸಿದರು. ಶಾಸಕರಾದ ಬಿ.ಪಿ.ಹರೀಶ, ಸುನಿಲಕುಮಾರ, ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಗಾಯತ್ರಿ ಸಿದ್ದೇಶ್ವರ, ಅಣಬೇರು ಜೀವನಮೂರ್ತಿ, ಜಿ.ಎಸ್.ಅನಿತಕುಮಾರ, ಎಸ್.ಎಂ.ವೀರೇಶ ಹನಗವಾಡಿ, ಶ್ರೀನಿವಾಸ ದಾಸಕರಿಯಪ್ಪ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಕೆ.ಎಂ. ಸುರೇಶ, ಶಿವನಗೌಡ ಟಿ.ಪಾಟೀಲ, ರಾಜನಹಳ್ಳಿ ಶಿವಕುಮಾರ, ಶಿವನಹಳ್ಳಿ ರಮೇಶ, ಜಿ.ಎಸ್.ಶ್ಯಾಮ ಮಾಯಕೊಂಡ, ದೊಗ್ಗಳ್ಳಿ ವೀರೇಶ, ಆರ್.ಎಲ್.ಶಿವಪ್ರಕಾಶ, ಬಿ.ಟಿ.ಸಿದ್ದಪ್ಪ, ಟಿಂಕರ್ ಮಂಜಣ್ಣ, ಕಿಶೋರಕುಮಾರ, ಎಸ್.ಟಿ.ಯೋಗೇಶ್ವರ ಇತರರು ಇದ್ದರು. ಇದೇ ವೇಳೆ ಜಿ.ಎಂ. ಸಿದ್ದೇಶ್ವರ ಅಂಧ ಮಕ್ಕಳೊಂದಿಗೆ ಎಂದಿನಂತೆ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು.
- - -
(ಕೋಟ್) ಜಿ.ಎಂ.ಸಿದ್ದೇಶ್ವರ ತಮ್ಮ ತಂದೆ ಕಾಲದಿಂದಲೂ ಇಡೀ ಕುಟುಂಬದವರು ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಂದೆ ಮೂಲಕ ರಾಜಕೀಯ ಪ್ರವೇಶಿಸಿದ ಸಿದ್ದೇಶ್ವರ ಕೇವಲ ತಮ್ಮ ಕುಟುಂಬಕ್ಕೆ ಸೀಮಿತವಾಗದೆ, ನೂರಾರು, ಸಾವಿರಾರು ಜನರನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರಾಗಿ ರೂಪಿಸಿದ್ದಾರೆ. ಬಳ್ಳಾರಿ ಜಿಲ್ಲಾದ್ಯಂತ ಬಿಜೆಪಿ ಬಾವುಟವನ್ನು ಹಾರಿಸುವಲ್ಲಿ ಸಿದ್ದೇಶ್ವರ ಮುಂಚೂಣಿಯಲ್ಲಿ ನಿಂತವರು. - ಎನ್.ರವಿಕುಮಾರ, ವಿಪ ಮುಖ್ಯ ಸಚೇತಕ.
- - -
-11ಕೆಡಿವಿಜಿ5: ದಾವಣಗೆರೆಯಲ್ಲಿ ಶನಿವಾರ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಅವರ 74ನೇ ಜನ್ಮದಿನ, ನಮ್ಮಭಿಮಾನ ಕಾರ್ಯಕ್ರಮವನ್ನು ಶಾಸಕ ಸುನಿಲಕುಮಾರ, ವಿಪ ಮುಖ್ಯ ಸಚೇತಕ ಎನ್.ರವಿಕುಮಾರ ಉದ್ಘಾಟಿಸಿದರು. -11ಕೆಡಿವಿಜಿ6, 7: ದಾವಣಗೆರೆಯಲ್ಲಿ ಶನಿವಾರ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ರ 74ನೇ ಜನ್ಮದಿನ, ನಮ್ಮಭಿಮಾನ ಕಾರ್ಯಕ್ರಮದಲ್ಲಿ ಬೃಹತ್ ಹಾರ ಹಾಕುವ ಮೂಲಕ ಮಾಯಕೊಂಡ ಮುಖಂಡರಾದ ಜಿ.ಎಸ್.ಶ್ಯಾಮ್, ಬಿ.ಟಿ.ಸಿದ್ದಪ್ಪ ಇತರರು ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.