ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ನಿಗಮವು 2023-24 ಮತ್ತು 2025-26 ನೇ ಆರ್ಥಿಕ ವರ್ಷದಲ್ಲಿ ಕಳ್ಳಬೇಟೆಗಳಿಂದ ವನ್ಯ ಸಂಪತ್ತು ರಕ್ಷಿಸುವಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕಟ್ಟಡ-ಅಗತ್ಯ ಉಪಕರಣಗಳನ್ನು ಒದಗಿಸಿದ್ದು, 21 ಶಿಬಿರಗಳನ್ನು ತಲಾ 3 ಲಕ್ಷ ರು. ವೆಚ್ಚದಲ್ಲಿ ಬಲಪಡಿಸಲಾಗಿದೆ.
ಅಲ್ಲದೆ, ಭದ್ರಾ ಹುಲಿ ಸಂರಕ್ಷಿತಾರಣ್ಯವನ್ನು ದಿಗಂತದಿಂದ ಕಣ್ಗಾವಲಿಡಲು, ಬೆಂಕಿಯಿಂದ ರಕ್ಷಣೆ ಮಾಡಲು ಮೂರು ಥರ್ಮಲ್ ಡ್ರೋನ್ ಒದಗಿಸಲಾಗಿದೆ. ವನ್ಯಜೀವಿಗಳ ಚಲನವಲನ ಹಾಗೂ ಹುಲಿ ಗಣತಿಗೆ ನೆರವಾಗಲು 100 ಕ್ಯಾಮೆರಾ ಟ್ರ್ಯಾಪ್‌ಗಳನ್ನು ನಿಗಮ ನೀಡಿದೆ. ಸಿಬ್ಬಂದಿ ಗಸ್ತು ತಿರುಗಲು ಯಾಂತ್ರಿಕೃತ ದೋಣಿ ಮತ್ತು ಮುತ್ತೊಡಿಯಲ್ಲಿರುವ ಸೀಗೇಖಾನ್ ವಿಶ್ರಾಂತಿ ಗೃಹ ಪುನರುಜ್ಜೀವನ, ಪರಿಸರ ಪ್ರವಾಸೋದ್ಯಮಕ್ಕೆ ಅನುಕೂಲವಾಗಲು ಒಂದು ಮಿನಿ ಬಸ್ ಹಾಗೂ ಮುತ್ತೊಡಿ-ಮಲ್ಲಂದೂರು ರಸ್ತೆ ದುರಸ್ತಿಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 2.58 ಕೋಟಿ ರು.ಗಳ ನೆರವು ನೀಡಿದೆ.ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರ ಉಸ್ತುವಾರಿಯ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ವಿದ್ಯುತ್ ಪ್ರಸರಣ ನಿಗಮ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಮೂಲಕ ನಿಗಮದ ಲಾಭಾಂಶದಲ್ಲಿ ನಾಡಿನ ವನ್ಯ ಸಂಪತ್ತು ರಕ್ಷಣೆಗೆ ಒತ್ತು ನೀಡಿದೆ.
ತಾಂತ್ರಿಕವಾಗಿ ಅಭಿವೃದ್ಧಿಗೆ ಹಾದಿ ನಿರ್ಮಿಸುತ್ತಿರುವ ನಿಗಮದ ಸಾಮಾಜಿಕ ಬದ್ಧತೆ ಶಾಲೆಗಳ ಬಲವರ್ಧನೆ ಕಡೆಯೂ ಹರಿದಿದೆ. ಶಾಲೆ-ಕಾಲೇಜುಗಳಿಗೆ ಮುಖ್ಯವಾಗಿ ದೃಷ್ಟಿಚೇತನ ಮಕ್ಕಳ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ, ಆರೋಗ್ಯ ಕ್ಷೇತ್ರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ರಾಜ್ಯದಲ್ಲೇ ಮಾದರಿಯಾಗಿದೆ.
ಕೆಂಪನಹಳ್ಳಿಯ ಆಶಾಕಿರಣ ದೃಷ್ಟಿ ಚೇತನ ಶಾಲೆಗೆ 16 ಲಕ್ಷ ರು. ವೆಚ್ಚದಲ್ಲಿ ಉಪಕರಣ ಒದಗಿಸಲಾಗಿದೆ. ಬಾಳೆಹೊನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್, ಕಡೂರಿನ ನಿವೇದಿತಾ ಶ್ರವಣದೋಷ ಮಕ್ಕಳ ಶಾಲೆಗೆ ಪೂರಕ ನೆರವಿಗೆ 20 ಲಕ್ಷ ರು. ಒದಗಿಸಲಾಗಿದೆ. ಅತ್ತಿಗುಂಡಿ ಗ್ರಾಮದ ಸರ್ಕಾರಿ ಶಾಲೆ ದುರಸ್ತಿಗೆ 8.5 ಲಕ್ಷ ರು. ನೀಡಲಾಗಿದೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ 29.43 ಲಕ್ಷ ರು. ವೆಚ್ಚದಲ್ಲಿ ಆ್ಯಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ಒದಗಿಸಲಾಗಿದೆ. ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ನೀಡಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ವಾಹನಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಇಷ್ಟೇ ಅಲ್ಲದೇ ಚಿಕ್ಕಮಗಳೂರಿನ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ನಿರ್ಮಾಣಕ್ಕೆ ಎರಡು ಕೋಟಿ ಹಾಗೂ ಜಿಲ್ಲಾ ರೈಫಲ್ಸ್ ಮತ್ತು ಶಾಟ್‌ಗನ್ ಅಸೋಸಿಯೇಷನ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಕೋಟಿ ರು. ಒದಗಿಸಿದೆ.
ವ್ಯಯಿಸಿರುವ ಸಿಎಸ್ಆರ್ ಅನುದಾನ
ಕೆ.ಜೆ.ಜಾರ್ಜ್ ಇಂಧನ, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ.
ಗೌರವ್ ಗುಪ್ತ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ.