ಅತಿಕ್ರಮಣವಾಗಿರುವ ಪ್ರತಿ ರಸ್ತೆ ಪಕ್ಕದ ಪಾದಚಾರಿ ಮಾರ್ಗ ಜನರ ಓಡಾಟಕ್ಕೆ ಸಿಗಲಿ
ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ ವಿಪರೀತ ಆಗಿದೆ. ಇಂತಹ ಸಂದರ್ಭದಲ್ಲಿ ಜನರ ಓಡಾಟಕ್ಕೆ ಮೀಸಲಿರಿಸಿದ ಸ್ಥಳದಲ್ಲಿ ಹೆಜ್ಜೆ ಹೆಜ್ಜೆಗೂ ಗೂಡಂಗಡಿಗಳು ತಲೆ ಎತ್ತಿದ್ದು ಪಾದಚಾರಿಗಳು ಪ್ರಾಣ ಭಯದಲ್ಲಿ ವಾಹನ ಸಂಚರಿಸುವ ಮಾರ್ಗದಲ್ಲೆ ಸಂಚರಿಸುತ್ತಿದ್ದು ಈ ಕೂಡಲೆ ಗೂಡಂಗಡಿಗಳನ್ನು ತೆರವುಗೊಳಿಸಬೇಕೆಂದು ರವೀಂದ್ರ ನಗರ ನಿವಾಸಿ ಮಂಜುನಾಥ ಬೋವಿವಡ್ಡರ್ ಎಂಬುವರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮನೀಷ್ ಮೌದ್ಗಿಲ್ ಯಲ್ಲಾಪುರ ಪಟ್ಟಣದ ಫುಟ್‌ಪಾತ್ ಅತಿಕ್ರಮಣಕ್ಕೆ ಕಠಿಣ ಕ್ರಮ ಜರುಗಿಸಿ ಆಪರೇಷನ್ ಫುಟ್ ಪಾತ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು. ಅದರಂತೆ ಅತಿಕ್ರಮಣವಾಗಿರುವ ಪ್ರತಿ ರಸ್ತೆ ಪಕ್ಕದ ಪಾದಚಾರಿ ಮಾರ್ಗ ಜನರ ಓಡಾಟಕ್ಕೆ ಸಿಗಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರಿಗೆ ಫುಟ್‌ಪಾತ್ ಅತ್ಯವಶ್ಯಕವಾಗಿದೆ.ಬಸ್ ನಿಲ್ದಾಣದ ಮಾರ್ಗ, ಅಂಬೇಡ್ಕರ್ ವೃತ್ತ, ಬೆಲ್ ರಸ್ತೆ, ಬಸವೇಶ್ವರ ವೃತ್ತ ಮತ್ತು ಹಲವುಕಡೆಗಳಲ್ಲಿ ಅತಿಕ್ರಮಣವಾಗಿದೆ. ಕೂಡಲೇ ತೆರವುಗೊಳಿಸಿ ಬರಲಿರುವ ರಾಜ್ಯ ಪ್ರಸಿದ್ಧ ಗ್ರಾಮದೇವಿ ಜಾತ್ರೆ ವೇಳೆಗೆ ಸ್ವಚ್ಛವಾದ ರಸ್ತೆ ವ್ಯವಸ್ಥಿತ ಪಾದಚಾರಿ ಮಾರ್ಗ ಆಗಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.