ಅಕ್ರಮ ವ್ಯಾಪಾರ ನಿಲ್ಲಿಸುವಂತೆ ಮನವಿ

KannadaprabhaNewsNetwork | Published : Jun 2, 2024 1:48 AM

ಸಾರಾಂಶ

ಜೂ.3 ರಂದು ಅಕ್ರಮ ವ್ಯಾಪಾರವನ್ನು ಜಿಲ್ಲಾಡಳಿತ ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ದಲಿತ ಮಿತ್ರ ಮೇಳದಿಂದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜೂ 5 ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಬೇಕಾಗುತ್ತದೆ

ಗದಗ: ಉತ್ತರ ಕರ್ನಾಟಕದ ಐತಿಹಾಸಿಕ ಮಠಗಳಲ್ಲಿ ಒಂದಾದ ನಗರದ ಜ.ತೋಂಟದಾರ್ಯ ಮಠದ ಜಾತ್ರೆ ಪ್ರತಿವರ್ಷ ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ. ಈ ಮೊದಲು ಜಾತ್ರೆ 5 ದಿನಗಳ ಕಾಲ ನಡೆಯುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಜಾತ್ರೆ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಕೂಡಲೇ ಇದಕ್ಕೆ ನಿರ್ಬಂಧ ಹೇರಬೇಕು ಎಂದು ದಲಿತ ಮಿತ್ರ ಮೇಳದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಾಡಗೇರಿ ಮಾತನಾಡಿ, ತೋಂಟದಾರ್ಯ ಮಠದ ಜಾತ್ರೆ ಮೊದಲು 5 ದಿನ ವಿಜೃಂಭಣೆಯಿಂದ ನಡೆಯುತ್ತಿತ್ತು. ವರ್ಷದಿಂದ ವರ್ಷಕ್ಕೆ 10-15 ದಿನಗಳವರೆಗೆ ವಿಸ್ತರಿಸಲಾಯಿತು. ಮುಂದುವರಿದ ಭಾಗವಾಗಿ ಇತ್ತೀಚಿನ ದಿನಗಳಲ್ಲಿ ಬರೋಬ್ಬರಿ 2 ತಿಂಗಳ ಕಾಲ ಜಾತ್ರೆಯ ನೆಪದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿದ್ದು, ನಗರದಲ್ಲಿರುವ ವ್ಯಾಪಾರಿಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೋಂಟದಾರ್ಯ ಮಠದ ಬೀದಿಯಲ್ಲಿ ಅಕ್ರಮವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಬಟ್ಟೆ,ಬಾಂಡೆ, ದಿನಸಿ ವಸ್ತು, ಮನೆ ಬಳಕೆ ವಸ್ತುಗಳು ಮಾರಾಟವಾಗುತ್ತಿವೆ. ಇದರಿಂದ ಅವಳಿ ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲ ವ್ಯಾಪಾರಸ್ಥರಿಗೂ ಬಿಸಿ ತಟ್ಟಿದೆ. ಅಂಗಡಿಗಳ ಬಾಡಿಗೆ ಕಟ್ಟಲು ಆಗದೆ ಪರದಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ತೋಂಟದಾರ್ಯ ಮಠದ ಬೀದಿಯಲ್ಲಿ ನಡೆಯುವ ಅಕ್ರಮ ವ್ಯಾಪಾರಕ್ಕೆ ಬ್ರೇಕ್ ಹಾಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವ್ಯಾಪಾರಸ್ಥರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಜೂ.3 ರಂದು ಅಕ್ರಮ ವ್ಯಾಪಾರವನ್ನು ಜಿಲ್ಲಾಡಳಿತ ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ದಲಿತ ಮಿತ್ರ ಮೇಳದಿಂದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜೂ 5 ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟೇಶ್ ದೊಡಮನಿ, ಹುಲಗಪ್ಪ ವಾಲ್ಮೀಕಿ, ಅನಿಲ ಮುಳ್ಳಾಳ, ಶಿವು ಬಂಗಾರಿ, ಪುಂಡಲಿಕ ದಾಸರ, ಗಿರೀಶ ಗಡದ, ಪುಟ್ಟರಾಜು ಕಳಸಣ್ಣವರ, ಮಹೇಶ ದ್ಯಾಂಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article