ಕನ್ನಡಪ್ರಭ ವಾರ್ತೆ, ಕೊಪ್ಪ
ಸೆಪ್ಟೆಂಬರ್ ೧೪ರಂದು ದೇಶಾದ್ಯಂತ ಹಿಂದಿ ದಿವಸ್ ಆಚರಣೆಗೆ ಕನ್ನಡಿಗರಾದ ನಮ್ಮ ಪ್ರಬಲ ವಿರೋಧವಿದೆ ಎಂದು ಕೊಪ್ಪ ಕನ್ನಡಪರ ಸಂಘಟನೆಗಳು ಶುಕ್ರವಾರ ಕೊಪ್ಪ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮುಖೇನ ಮನವಿ ಸಲ್ಲಿಸಿದವು. ಕರ್ನಾಟಕದಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರಗಳು, ಅರ್ಜಿ ಫಾರಂ, ಚಲನ್‌ಗಳು, ಡಿಜಿಟಲ್ ಬೋಡ್ ರ್, ನಾಮಫಲಕಗಳು, ಎಟಿಎಂ ಮೆಷಿನ್‌ಗಳು, ಘೋಷಣೆಗಳು, ಎಸ್ ಎಂಎಸ್ ಸಂದೇಶಗಳು, ಸಾರ್ವಜನಿಕ ಪ್ರಕಟಣೆಗಳಲ್ಲಿ ಅನ್ಯ ಭಾಷೆಯನ್ನು ಬಳಸದೆ ಕನ್ನಡವನ್ನೇ ಬಳಸಬೇಕು.ಕರ್ನಾಟಕದ ಸರ್ಕಾರಿ ಕಚೇರಿ, ಬ್ಯಾಂಕ್, ರೈಲ್ವೇ, ಅಂಚೆ ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅನ್ಯರಾಜ್ಯಗಳ ನೌಕರರು ಕೆಲಸಕ್ಕೆ ಸೇರಿದ ೨ ತಿಂಗಳೊಳಗೆ ಕನ್ನಡ ಭಾಷೆ ಕಡ್ಡಾಯವಾಗಿ ಕಲಿಯಲು ಕಾನೂನು ರೂಪಿಸಬೇಕು. ಆ ಅವಧಿಯೊಳಗೆ ಕನ್ನಡ ಕಲಿಯದಿದ್ದರೆ ಇವರನ್ನು ಇಲ್ಲಿಂದ ಅವರ ರಾಜ್ಯಕ್ಕೆ ವರ್ಗಾಯಿಸಬೇಕು. ಹಿಂದಿ ದಿವಸ್ ಆಚರಣೆ, ಹಿಂದಿ ಕಲಿಕೆಗೆ ಪ್ರೋತ್ಸಾಹ ಮುಂತಾದ ಕಾರ್ಯಕ್ರಮಗಳ ಹೆಸರಿನಲ್ಲಿ ಕನ್ನಡ ಭಾಷೆ ಅಸ್ತಿತ್ವಕ್ಕೆ ಮಾರಕ ವಾಗುವ ಚಟುವಟಿಕೆಗಳನ್ನು ಕರ್ನಾಟಕದಲ್ಲಿ ನಡೆಸಲು ಅವಕಾಶ ನೀಡಬಾರದು.
ಕರ್ನಾಟಕ ಭೌಗೋಳಿಕ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಭರ್ತಿ ಮಾಡಲು ಪ್ರತ್ಯೇಕ ನೇಮಕಾತಿ ನಿಯಮ ರೂಪಿಸಿ, ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕರ್ನಾಟಕ ಜನತೆ ಶ್ರಮದಿಂದ ಕಟ್ಟಿ ಬೆಳೆಸಿರುವ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜತೆ ವಿಲೀನಗೊಳಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳು ವಿಲೀನ ರದ್ದುಪಡಿಸಿ ಅವನ್ನು ಕನ್ನಡಿಗರಿಗೆ ಹಿಂದಿರುಗಿಸಬೇಕು ಎನ್ನುವ ಆಗ್ರಹಗಳನ್ನೊಳಗೊಂಡ ಮನವಿ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಚಂದ್ರಕಲಾ, ಸಿರಿಗನ್ನಡ ವೇದಿಕೆ ಚಾವಲ್ಮನೆ ಸುರೇಶ್ ನಾಯ್ಕ್, ಕರ್ನಾಟಕ ರಕ್ಷಣಾ ವೇದಿಕೆಯ ಫ್ರಾನ್ಸಿಸ್ ಕರ್ಡೋಜ, ವಿದ್ಯಾಧರ ಕನ್ನಡ ಪ್ರತಿಷ್ಠಾನದ ರೂಪಕಲಾ, ದಲಿತ ಸಂಘರ್ಷ ಸಮಿತಿಯ ರಾಜಾಶಂಕರ್, ಭೀಮ್ ಆರ್ಮಿಯ ಸುನೀಲ್, ನುಡಿಕನ್ನಡ ಪುಸ್ತಕ ಮನೆಯ ನಿಲುಗುಳಿ ಪದ್ಮನಾಭ, ಕಾರ್ಯನಿರತ ಪತ್ರಕರ್ತರ ಸಂಘದ ಭಾಸ್ಕರ್ ಶೆಟ್ಟಿ, ಕನ್ನಡ ಜಾನಪದ ಪರಿಷತ್ತಿನ ಜಿನೇಶ್ ಇರ್ವತ್ತೂರು, ಕೆ.ಆರ್. ಗೋಪಾಲಗೌಡ ಮುಂತಾದವರಿದ್ದರು.