ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ರಾಜೇಂದ್ರ ಸಿದ್ದಾರ್ಥ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೊಳಿಸಬೇಕು. ನ್ಯಾ.ನಾಗಮೋಹನ್ ದಾಸ್ ಅವರ ಸಮಿತಿಗೆ ಈ ಹಿಂದೆ 7 ವರ್ಷಗಳ ಕಾಲ ಅಧ್ಯಯನ ನಡೆಸಿದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ದತ್ತಾಂಶಗಳಿರುವ ವರದಿಯ ಶಿಫಾರಸ್ಸುಗಳನ್ನು ಬಳಸಿಕೊಂಡು ವರದಿ ತಯಾರಿಸಲು ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು.ನ್ಯಾ.ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ವರ್ಗಿಕರಣದ ಶಿಫಾರಸ್ಸನ್ನು ಪರಿಗಣಿಸಿ ಹೆಚ್ಚುವರಿ ಶೇ.2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎಬಿಸಿಡಿ ವರ್ಗಿಕರಣದ ಗುಂಪುಗಳಿಗೆ ಸಮಾನವಾಗಿ ಹಂಚಬೇಕು. ಅದರಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7% ಮೀಸಲಾತಿಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಗಳನ್ನು ತಡೆಹಿಡಿಯಬೇಕು. ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರ್ತಿಸಿ ಶೇ.1ಕ್ಕಿಂತ ಹೆಚ್ಚು ಒಳಮೀಸಲಾತಿ ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸೀಗನಾಯಕ, ಎಚ್.ಹನುಮಂತು, ರಾಜ್ಯ ಕಾರ್ಯದರ್ಶಿ ಶಾಗ್ಯ ಮಹೇಶ್, ಜಿಲ್ಲಾ ಸಂಯೋಜಕ ದೊಡ್ಡಿಂದುವಾಡಿ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಸಿದ್ದಯ್ಯನಪುರ ಮಂಜು, ಸುಂದರ್, ಜಿಲ್ಲಾ ಕಾರ್ಯದರ್ಶಿ ಮಾದೇಶ್ ಕೋಡಿಪುರ ಇತರರು ಹಾಜರಿದ್ದರು.