ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ರಾಜಧನ ಇಳಿಕೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಕೆಂಪು ಕಲ್ಲು ಗಣಿ ಮಾಡುವವರು, ಉದ್ಯಮಿಗಳು, ಕಂಟ್ರಾಕ್ಟರುದಾರರ ಸಭೆ ನಡೆಸಿ ದರ ಇಳಿಕೆ ಮಾಡಲು ಅಗತ್ಯ ಕ್ರಮ ವಹಿಸುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರ ಕೆಂಪು ಕಲ್ಲು ಗಣಿಗಾರಿಕೆ ಮೇಲೆ ವಿಧಿಸಿದ ರಾಜಧನವನ್ನು ಶೇ.58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿಯಾಗಿಯೇ ಉಳಿದಿದೆ. ಈ ಮೊದಲು 30 ರು. ಇದ್ದ ಕಲ್ಲಿನ ದರ ಈಗ ಒಂದು ಕೆಂಪು ಕಲ್ಲಿಗೆ 50-55 ರು. ಆಗಿದೆ. ಇದು ಬಡವರು, ಮಧ್ಯಮ ವರ್ಗ, ಉದ್ಯಮಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ರಾಜ್ಯ ಸರ್ಕಾರ ಕೆಂಪುಕಲ್ಲಿನ ರಾಜಧನವನ್ನು 920 ರು.ಗೆ ಇಳಿಸಿದ ಮೇಲೂ ಕೆಂಪುಕಲ್ಲು ಗಣಿಗಾರಿಕೆ ನಡೆಸುವವರು ಕಲ್ಲಿನ ದರವನ್ನು ಇಳಿಸದಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಹಿರಿಯ ಭೂ ವಿಜ್ಞಾನಿ ಹಾಗೂ ಗಣಿ ಇಲಾಖೆ ಅಧಿಕಾರಿ ಹೇಳುತ್ತಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಪ್ರಸ್ತುತ ದರದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು 3 ಲಕ್ಷ ರು. ಕೆಂಪು ಕಲ್ಲಿಗೇ ಬೇಕಾಗುತ್ತದೆ. ಈ ದರದಲ್ಲಿ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಿಲ್ಲ ಹಾಗೂ ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ ಎಂದು ತಿಳಿಸಿದರು.ಆದ್ದರಿಂದ ಸರ್ಕಾರದ ರಾಜಧನಕ್ಕೆ ತಕ್ಕಂತೆ ಕೆಂಪುಕಲ್ಲು ದರ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಇದೇ ಸಂದರ್ಭ ಮನವಿ ಮಾಡಲಾಯಿತು.ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಪೂಜಾರಿ, ರಾಜು ಪೂಜಾರಿ, ಕಿರಣ್ ಬಡ್ಲೆಗುತ್ತು ಇದ್ದರು.