ಚಿಕ್ಕಮಗಳೂರು, ಜಿಲ್ಲೆಯಲ್ಲಿ ಅತಿಯಾದ ಮಳೆ ಸುರಿಯುತ್ತಿದ್ದು ವ್ಯಾಪಕವಾಗಿ ಹಾನಿ ಸಂಭವಿಸಿರುವುದರಿಂದ ಈ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಅತಿಯಾದ ಮಳೆ ಸುರಿಯುತ್ತಿದ್ದು ವ್ಯಾಪಕವಾಗಿ ಹಾನಿ ಸಂಭವಿಸಿರುವುದರಿಂದ ಈ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.ಮಳೆ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ತೊಗರಿಹಂಕಲ್ ಗ್ರಾಪಂ ವ್ಯಾಪ್ತಿಯ ಗಾಳಿಪೂಜೆ, ಅತ್ತಿಗಿರಿ, ಮಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಪಶ್ಚಿಮಘಟ್ಟ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಈ ಭಾಗದ ಕೆರೆ ಕಟ್ಟೆಗಳು ತುಂಬಿ ಕೋಡಿಬಿದ್ದು ಹೋಗುತ್ತಿವೆ. ದೀಪದ ಕೆಳಗೆ ಕತ್ತಲೆ ಎಂಬಂತೆ ಈ ಭಾಗದಲ್ಲಿ ಅಪಾರ ಹಾನಿಯಾಗಿರುವ ಜೊತೆಗೆ ಯಾವುದೇ ಪ್ರಯೋಜನ ವಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿ ಹೆಚ್ಚಿನ ಪರಿಹಾರ ನೀಡುವಂತೆ ಎಲ್ಲಾ ಶಾಸಕರೊಂದಿಗೆ ಸೇರಿ ಸರ್ಕಾರದ ಮೇಲೆ ಒತ್ತಡ ತರಲಾಗುವುದೆಂದು ಹೇಳಿದರು.ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಗಳು ಸುಮಾರು 9 ಕೋಟಿ ರು.ಗಳಿಗೂ ಹೆಚ್ಚು ಹಾನಿಯಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 5 ಕೋಟಿಗೂ ಹೆಚ್ಚು ಹಾನಿ ಸಂಭವಿಸಿರುವ ಬಗ್ಗೆ ಅಂದಾಜು ಮಾಡಲಾಗಿದ್ದು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ಎಲ್ಲಾ ಕಡೆ ಪ್ರವಾಸ ಮಾಡಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.ಈ ತಾಲ್ಲೂಕಿನ 4 ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ 21 ಮನೆಗಳು ಕುಸಿದಿದ್ದು, 10 ಮನೆಗಳು ಭಾಗಶಃ ಕುಸಿದಿವೆ. ಇಂತಹ ಪ್ರತೀ ಮನೆಗೆ 1.20 ಲಕ್ಷ ರು.ನಂತೆ ಪರಿಹಾರ ಬಿಡುಗಡೆಯಾಗಿದ್ದು ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಆದೇಶದ ಪ್ರತಿ ನೀಡಲಾಗಿದೆ. ಸಂಪೂರ್ಣ ಕುಸಿದಿರುವ 10 ಮನೆಗಳಿಗೆ ಸರ್ಕಾರದ ನಿಯಮದ ಪ್ರಕಾರ ಜಿಲ್ಲಾಡಳಿತ ಪರಿಹಾರ ನೀಡಲಿದೆ ಎಂದರು.ಮುಳ್ಳಯ್ಯನ ಗಿರಿ, ಬಾಬಾ ಬುಡನ್‌ಗಿರಿ, ಅತ್ತಿಗುಂಡಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ರಸ್ತೆ ಕುಸಿತದ ಹಾನಿ ಸಂಭವಿಸಿದ್ದು, ಆ ಸ್ಥಳಗಳಿಗೂ ತೆರಳಿ ಪರಿಹಾರಕ್ರಮ ಕೈಗೊಳ್ಳುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ಶಾಸಕರು ಮಳೆಯಿಂದ ಅಪಾರ ಪ್ರಮಾಣದ ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದ್ದು, ಬಯಲುಸೀಮೆ ಭಾಗದಿಂದ ಲೈನ್ ಮ್ಯಾನ್‌ಗಳನ್ನು ಕರೆಸಿ ಅತ್ಯಂತ ತ್ವರಿತವಾಗಿ ವಿದ್ಯುತ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ಕುಮಾರ್, ಮುಖಂಡರಾದ ಪ್ರವೀಣ್, ಜಯರಾಂ, ಕಲ್ಲೇಶ್, ಜಾವಿದ್, ಕೆ. ಮಹಮದ್ ಹಾಗೂ ತಹಸೀಲ್ದಾರ್ ಡಾ.ಸುಮಂತ್, ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ, ಎಇಇ ಚೇತನ್, ತಾಪಂ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್ ಹಾಜರಿದ್ದರು. 27 ಕೆಸಿಕೆಎಂ 6ಅತಿಯಾದ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.